ಬೆಂಗಳೂರು: ಸುರಕ್ಷತೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್), ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ (ಪಿಎಸ್‌ಡಿ) ಅಳವಡಿಸಲು ಮುಂದಾಗಿದೆ.
ನಮ್ಮ ಮೆಟ್ರೋ ರೈಲು ಕಾರ್ಯಾಚರಣೆಗೊಳ್ಳುತ್ತಿರುವ ಹಸಿರು ಮತ್ತು ನೀಲಿ ಮಾರ್ಗದ ಪ್ರತಿಯೊಂದು ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದರೂ ಆತ್ಮಹತ್ಯೆ ಯತ್ನ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಅಲ್ಲದೇ, ಬಹುತೇಕ ಪ್ರಯಾಣಿಕರು ಮೆಟ್ರೊ ರೈಲು ಏರುವ ಧಾವಂತದಲ್ಲಿ ಹಳದಿ ಪಟ್ಟಿ ದಾಟುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿಯೇ, ನಿಗಮವು ಗಾಜಿನ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳ ಮೊರೆ ಹೋಗಿದೆ. ಇವು ಮೆಟ್ರೊ ರೈಲಿನ ಪ್ರವೇಶ ದ್ವಾರದಲ್ಲಷ್ಟೇ ತೆರೆದುಕೊಳ್ಳಲಿವೆ.
ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆಗೆ ಕರೆದಿದ್ದ ಟೆಂಡರ್ ಅನ್ನು ಅಲ್‌ಸ್ಟಾಮ್ ಟ್ರಾನ್ಸ್‌ಪೋರ್ಟ್ ಇಂಡಿಯಾ ಸಂಸ್ಥೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಳೇನ ಅಗ್ರಹಾರ – ನಾಗವಾರ ಮಾರ್ಗದ (ಗುಲಾಬಿ ಮಾರ್ಗ- 21 ಕಿ.ಮೀ) ನಿಲ್ದಾಣಗಳಲ್ಲಿ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ – ಕೆ.ಆರ್.ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ (ನೀಲಿ ಮಾರ್ಗ- 56 ಕಿ.ಮೀ) ನಿಲ್ದಾಣಗಳಲ್ಲಿ ಪಿಎಸ್‌ಡಿಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ 857 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಗುಲಾಬಿ ಮಾರ್ಗದಲ್ಲಿ ಪೂರ್ಣ ಎತ್ತರದ ಪ್ಲಾಟ್‌ಫಾರ್ಮ್ ಪರದೆಯ ಬಾಗಿಲುಗಳನ್ನು ಹಾಗೂ ನೀಲಿ ಮಾರ್ಗದಲ್ಲಿ ಅರ್ಧ ಎತ್ತರದ ಪ್ಲಾಟ್‌ಫಾರ್ಮ್ ಸ್ಕ್ರೀನ್ ಗೇಟ್‌ಗಳನ್ನು (ಪಿಎಸ್‌ಜಿ) ಅಳವಡಿಸಲು ನಿರ್ಧರಿಸಲಾಗಿದೆ. ಗುತ್ತಿಗೆ ಸಂಸ್ಥೆಯೇ 5 ವರ್ಷಗಳ ಕಾಲ ನಿರ್ವಹಣೆ ಮಾಡಲಿದ್ದು, ಭದ್ರತಾ ಸಿಬ್ಬಂದಿಗೆ ತರಬೇತಿ ಕೂಡ ನೀಡಲಿದೆ. ಈ ಯೋಜನೆಗೆ ಜಪಾನ್ ಇಂಟರ್‌ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ (ಜೆಐಸಿಎ) ಆರ್ಥಿಕ ಸಹಕಾರ ನೀಡುತ್ತಿದೆ.