ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ತಲೆಮರೆಸಿಕೊಂಡಿದ್ದ A-9 ರಾಜು ಆಲಿಯಾಸ್ ಧನರಾಜ್ ನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ರೇಣುಕಾಸ್ವಾಮಿಗೆ ಮೆಗ್ಗರ್ ಡಿವೈಸ್ ಬಳಸಿ ಕರೆಂಟ್ ಶಾಕ್ ಕೊಟ್ಟಿದ್ದ ಧನರಾಜ್ ನನ್ನು ವಿಶೇಷ ತಂಡದಿಂದ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಈತ A-5 ನಂದೀಶ್ ಜೊತೆಗೂಡಿ ರೇಣುಕಾಸ್ವಾಮಿ ಮೆಗ್ಗರ್ ಡಿವೈಸ್ ಬಳಸಿ ಕರೆಂಟ್ ಶಾಕ್ ಕೊಟ್ಟಿದ್ದ ಎನ್ನಲಾಗಿದೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಮೆಗ್ಗರ್ ಡಿವೈಸ್ ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕೊಲೆ ಕೇಸ್ ನಲ್ಲಿ ಪವಿತ್ರಾ ಗೌಡ ಮ್ಯಾನೇಜರ್ ದೇವರಾಜ್ ಎಂಬಾತನನ್ನು ನಿನ್ನೆ ಮೈಸೂರು ರಸ್ತೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಟ ದರ್ಶನ್ ಹಾಗೂ ಅವರ ಗೆಳತಿ ಪವಿತ್ರಗೌಡ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಗೆದಷ್ಟು ಹೊಸ ಹೊಸ ಸಂಗತಿಗಳು ಹೊರ ಬೀಳುತ್ತಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.