ಬೆಂಗಳೂರು: ಬೆಂಗಳೂರು ಹೊರವಲಯದ ಹೊಸಕೋಟೆ ಬಳಿ ಭಾನುವಾರ ಮುಂಜಾನೆ ತರಕಾರಿ ಸಾಗಿಸುತ್ತಿದ್ದ 28 ವರ್ಷದ ಯುವಕನನ್ನು ತಂಡವೊಂದು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದೆ.
ಮೃತರನ್ನು ಗಂಗಾಪುರ ನಿವಾಸಿ ನವೀನ್ ನಾಯ್ಕ್ ಎಂದು ಗುರುತಿಸಲಾಗಿದ್ದು, ತನ್ನ ಸ್ನೇಹಿತ ಚಂದ್ರಕೇಶ್ವರ್ ಅವರೊಂದಿಗೆ ಓಮ್ನಿ ವ್ಯಾನ್‌ನಲ್ಲಿ ಹೊಸಕೋಟೆ ಮಾರುಕಟ್ಟೆಗೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ.
ಬೆಂಗಳೂರು-ತಿರುಪತಿ ಹೆದ್ದಾರಿಯ ಮೈಲಾಪುರ ಗೇಟ್ ಬಳಿ ಕೆಂಪು ಬಣ್ಣದ ಕಾರೊಂದು ನಾಯಕ್ ಅವರ ವ್ಯಾನ್ ಅನ್ನು ಅಡ್ಡಗಟ್ಟಿದೆ. ಕನಿಷ್ಠ ನಾಲ್ವರು ವಾಹನದಿಂದ ಹೊರಬಂದು ನಾಯಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಚಂದ್ರಕೇಶ್ವರ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು TNIE ಗೆ ತಿಳಿಸಿದ್ದಾರೆ.
ಚಂದ್ರಕೇಶ್ವರ್ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದು, ನಾಯಕ್ ಅವರು ಅತಿವೇಗ ಮತ್ತು ಓವರ್‌ಟೇಕ್ ಮಾಡುವ ಬಗ್ಗೆ ಕಾರು ಚಾಲಕನೊಂದಿಗೆ ಜಗಳವಾಡಿದರು. ನಂತರ ಆತನ ಮೇಲೆ ಹಲ್ಲೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಗ್ಯಾಂಗ್ ಮತ್ತು ನಾಯಕ್ ನಡುವೆ ವಾಗ್ವಾದ ನಡೆಯಿತು ಮತ್ತು ಪರಿಸ್ಥಿತಿ ಉಲ್ಬಣಗೊಂಡಿತು. ಆರೋಪಿಗಳಲ್ಲಿ ಒಬ್ಬಾತ ಕಾರಿನಿಂದ ರಾಡ್ ತೆಗೆದು ನಾಯಕ್ ಅವರ ಮುಖಕ್ಕೆ ನಿರಂತರವಾಗಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರು ನಾಯಕ್ ಅವರ ವಾಹನವನ್ನು ಹಿಂಬಾಲಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಯಾವುದೇ ಗಲಾಟೆಗಳು ನಡೆದಿವೆಯೇ ಎಂದು ಪರಿಶೀಲಿಸಲು ಪೊಲೀಸರು ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.