ಬೆಂಗಳೂರು: ರಾಜ್ಯಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಕಾರ್ಯಕ್ರಮ ವಿಧಾನಸೌಧದ ಮುಂಭಾಗ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಿಸಿಎಂ ಡಿಕೆ ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜನತೆ ಯೋಗಾಸನಗಳನ್ನು ಅಭ್ಯಾಸ ಮಾಡಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ಮಾನಸಿಕ ಶಾಂತಿ ಮತ್ತು ಭಾವನಾತ್ಮಕ ತೃಪ್ತಿಯ ಮೇಲೆ ಯೋಗದ ಆಳವಾದ ಪ್ರಭಾವವನ್ನು ಉಲ್ಲೇಖಿಸಿ ಭಾರತೀಯ ಸಂಸ್ಕೃತಿಯಲ್ಲಿ ಯೋಗದ ಆಳವಾದ ಬೇರುಗಳನ್ನು ಮತ್ತು ಅದರ ಜಾಗತಿಕ ಮಹತ್ವವನ್ನು ಒತ್ತಿ ಹೇಳಿದರು.
"ಯೋಗವು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ಅದರ ಪ್ರಾಮುಖ್ಯತೆಯನ್ನು ನಮ್ಮ ಧರ್ಮಗ್ರಂಥಗಳಲ್ಲಿ ಉತ್ತಮವಾಗಿ ದಾಖಲಿಸಲಾಗಿದೆ ಮತ್ತು ಈಗ ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ, ಯೋಗದ ಗುರುವಾಗಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸಿದೆ, ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸುವ ಸಮಗ್ರ ಅಭ್ಯಾಸವಾಗಿದೆ ಎಂದು ರಾಜ್ಯಪಾಲರು ಹೇಳಿದರು.
ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಸಚಿವ ಸಂತೋಷ್ ಲಾಡ್ ಫೌಂಡೇಷನ್ ಹಾಗೂ ಶ್ವಾಸ ಯೋಗ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಯೋಗದಿನಾಚರಣೆಯಲ್ಲಿ ಭಾಗಿಯಾಗಿದ್ದರು.
ಬಳ್ಳಾರಿಯ ಜೆಎಸ್‌ಡಬ್ಲ್ಯು ಟೌನ್‌ಶಿಪ್‌ನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಗಣ್ಯರು ಸಿದ್ದರಾಮಯ್ಯ ಅವರೊಂದಿಗೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.
ಬಿಜೆಪಿ ಕೂಡ ನಗರದ ಮಲ್ಲೇಶ್ವರಂನಲ್ಲಿರುವ ತನ್ನ ರಾಜ್ಯ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಶಾಸಕ ಡಾ ಸಿ ಎನ್ ಅಶ್ವಥ್ ನಾರಾಯಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಹಾಸನ, ಶಿವಮೊಗ್ಗ, ಮೈಸೂರು, ಬೆಳಗಾವಿ, ಬೀದರ್, ತುಮಕೂರು, ದಕ್ಷಿಣ ಕನ್ನಡ ಮತ್ತು ರಾಯಚೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.