ಬೆಂಗಳೂರು: ಉಪನಗರ ರೈಲು ಯೋಜನೆ ಬಳಿಕ 23,000 ಕೋಟಿ ರೂ. ವೆಚ್ಚದ 'ಬೆಂಗಳೂರು ವರ್ತುಲ ರೈಲ್ವೆ ಜಾಲ' ನಿರ್ಮಾಣಕ್ಕೆ ರೈಲ್ವೇ ಇಲಾಖೆ ಮುಂದಾಗಿದ್ದು, ನೀಲನಕ್ಷೆ ರೂಪಿಸುತ್ತಿದೆ.
ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಈ ವಿಷಯ ತಿಳಿಸಿದರು.
ಬೆಂಗಳೂರು ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾಗಿದ್ದು, ಸಾರ್ವಜನಿಕ ಸಾರಿಗೆ ಅಗತ್ಯತೆಗಳು ಹೆಚ್ಚಾಗಿದೆ. ಆ ಕಾರಣಕ್ಕೆ 23 ಸಾವಿರ ಕೋಟಿ ರೂ. ವೆಚ್ಚದ ವರ್ತುಲ ರೈಲ್ವೆ ಯೋಜನೆಗೆ ಡಿಪಿಆರ್ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ವರ್ತುಲ ರೈಲು ಯೋಜನೆಯು ಉಪನಗರ ರೈಲು ಯೋಜನೆಗೆ ಪೂರಕವಾಗಿರಲಿದೆ ಎಂದು ಹೇಳಿದರು.
ನಿಡುವಂದ-ವಡ್ಡರಹಳ್ಳಿ-ದೇವನಹಳ್ಳಿ-ಮಾಲೂರು-ಹೀಲಲಿಗೆ-ಹೆಜ್ಜಾಲ-ಸೋಲೂರು ನಿಲ್ದಾಣಗಳ ಮೂಲಕ ನಗರದ ಪ್ರಮುಖ ರೈಲ್ವೆ ಕೊಂಡಿಗಳಿಗೆ ಉದ್ದೇಶಿತ ವರ್ತುಲ ರೈಲು ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ತಲುಪಿದ್ದು, ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ. ಡಿಪಿಆರ್ ಸಿದ್ಧವಾದ ಕೂಡಲೇ ರಾಜ್ಯ ಸರಕಾರದಿಂದ ಅಗತ್ಯ ಭೂಮಿಯ ಸ್ವಾಧೀನಕ್ಕೆ ಕ್ರಮ ಕೈಗೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ನಗರದ ರೈಲ್ವೆ ಸಂಪರ್ಕ ಸಾಮರ್ಥ್ಯ ವೃದ್ಧಿಸಲು ಸುಮಾರು 43 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. 2022ರಲ್ಲಿ ಮಂಜೂರಾಗಿರುವ ಸುಮಾರು 6,084 ಕೋಟಿ ರೂ. ವೆಚ್ಚದ ಬೆಟ್ಟ ಹಲಸೂರು-ರಾಜಾನುಕುಂಟೆ (15 ಕಿ.ಮೀ), ವೈಟ್‌ಫೀಲ್ಡ್-ಬಂಗಾರಪೇಟೆ (47 ಕಿ.ಮೀ), ಬೈಯಪ್ಪನಹಳ್ಳಿ-ಹೊಸೂರು (48.5 ಕಿ.ಮೀ) ಮತ್ತು ಯಲಹಂಕ-ದೇವನಹಳ್ಳಿ (23.7 ಕಿ.ಮೀ) ರೈಲ್ವೆ ಮಾರ್ಗದ ಸರ್ವೇ ಕಾರ್ಯಗಳು ಪ್ರಗತಿಯಲ್ಲಿದ್ದು, ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಜತೆಗೆ 12,930 ಕೋಟಿ ವೆಚ್ಚದಲ್ಲಿ ಬೆಂಗಳೂರು-ತುಮಕೂರು (70 ಕಿ.ಮೀ), ಚಿಕ್ಕ ಬಾಣಾವಾರ-ಹಾಸನ (166 ಕಿ.ಮೀ), ಬೆಂಗಳೂರು-ಮೈಸೂರು (137 ಕಿ.ಮೀ) ಮತ್ತು ದೇವನಹಳ್ಳಿ-ಬಂಗಾರಪೇಟೆ (125 ಕಿ.ಮೀ) ಯೋಜನೆಗಳ ವಿಸ್ತೃತ ವರದಿ ಸಿದ್ಧಪಡಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಸದ್ಯ ಬೆಂಗಳೂರು ರೈಲ್ವೆ ಹಾಗೂ ರಸ್ತೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 8 ರೈಲ್ವೆ ಮೇಲ್ಸೇತುವೆ ಹಾಗೂ 4 ರೈಲ್ವೆ ಕೆಳಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೆ 243.41 ಕೋಟಿ ರೂ. ಮಂಜೂರು ಮಾಡಲಾಗಿದೆ. 5 ಯೋಜನೆಗಳಿಗೆ 50:50 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ವೆಚ್ಚ ಭರಿಸುತ್ತಿವೆ. 3 ಯೋಜನೆಗಳು ರೈಲ್ವೆ ಇಲಾಖೆ ಅನುದಾನದಲ್ಲಿ ಹಾಗೂ 4 ಕಾಮಗಾರಿಗಳನ್ನು ಬಿಬಿಎಂಪಿ ನೆರವಿನಿಂದ ಕೈಗೊಳ್ಳಲಾಗುತ್ತಿದೆ.
1997-98ರಲ್ಲಿ ಮಂಜೂರಾಗಿ ನನೆಗುದಿಗೆ ಬಿದ್ದಿದ್ದ ಮಹತ್ವದ 492 ಕೋಟಿ ರೂ. ವೆಚ್ಚದ ಬೆಂಗಳೂರು-ವೈಟ್‌ಫೀಲ್ಡ್ (38 ಕಿ.ಮೀ) ಮಾರ್ಗದ ನಾಲ್ಕು ಪಥದ ಯೋಜನೆಯ ಕಾಮಗಾರಿಗೆ ವೇಗ ನೀಡಲಾಗಿದ್ದು, ಬಾಕಿ ಉಳಿದಿರುವ ಬೆಂಗಳೂರು ದಂಡು-ಬೈಯಪ್ಪನಹಳ್ಳಿ ನಡುವೆ 13 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. 2025ರ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
'ಕುಂಟುತ್ತಾ ಸಾಗಿರುವ ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಗ ನೀಡುವ ಸಂಬಂಧ ಮುಂದಿನ ತಿಂಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದೂ ಸಚಿವರು ತಿಳಿಸಿದರು.
ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ಉತ್ತಮ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಬೈಯಪ್ಪನಹಳ್ಳಿಯಲ್ಲಿ 314 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸಂಪರ್ಕ ಕೊರತೆಯಿಂದ ಬಳಕೆಯಾಗದಿರುವ ಬಗ್ಗೆ ಮಾಹಿತಿ ಇದೆ. ಆ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈಲ್ವೆ ಸಚಿವಾಲಯದಿಂದ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳನ್ನು ಕ್ರಮವಾಗಿ 485 ಮತ್ತು 387 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದ್ದು 2025ರ ವೇಳೆಗೆ ಪೂರ್ಣಗೊಳ್ಳಲಿದೆ. ಈ ಎರಡೂ ನಿಲ್ದಾಣಗಳಿಗೆ ಶೀಘ್ರವೇ ಸ್ಥಳೀಯ ಸಂಸದರ ಜತೆ ಭೇಟಿ ನೀಡಿ ಕಾಮಗಾರಿ ಸ್ಥಿತಿಗತಿ ಅವಲೋಕಿಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ಕೇಂದ್ರದಿಂದಲೇ ಕಾಮಗಾರಿ
ರಾಜ್ಯದಲ್ಲಿ ರೂ.1699 ಕೋಟಿ ವೆಚ್ಚದ 93 ರೈಲ್ವೆ ಮೇಲ್ಸೇತುವೆ/ಕೆಳಸೇತುವೆಗಳಿಗೆ ಅನುಮೋದನೆ ನೀಡಲಾಗಿತ್ತು. ಅದರಲ್ಲಿ 49 ಕಾಮಗಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೆಚ್ಚ ಹಂಚಿಕೆ ಆಧಾರದಲ್ಲಿ ಅನುಮೋದನೆಯಾಗಿದ್ದವು. ಅದರಂತೆ ರೈಲ್ವೆ ಇಲಾಖೆಯ ಪಾಲು ರೂ.850 ಕೋಟಿ ರಾಜ್ಯದ ಪಾಲು ರೂ.849 ಕೋಟಿ ಆಗಿತ್ತು. ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಉಳಿದ ಎಲ್ಲ ಕಾಮಗಾರಿಗಳ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಲು ನಿರ್ಧರಿಸಿದೆ. ಅದರಂತೆ 49 ಕಾಮಗಾರಿಗಳ ಪೈಕಿ 32 ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಹಂಚಿಕೆ ಒಪ್ಪಂದವನ್ನು ಹಿಂಪಡೆಯಲಾಗಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ಬೆಂಗಳೂರು ನಗರ ರೈಲ್ವೆ ಸಂಪರ್ಕ ಉತ್ತಮಗೊಳಿಸಲು ಸುಮಾರು ರೂ.43 ಸಾವಿರ ಕೋಟಿ ಮೊತ್ತದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಬೆಟ್ಟಹಲಸೂರು–ರಾಜಾನುಕುಂಟೆ ಹೊಸ ಮಾರ್ಗ ವೈಟ್‌ಫೀಲ್ಡ್–ಬಂಗಾರಪೇಟೆ ಕ್ವಾಡ್ರುಪ್ಲಿಂಗ್ ಬೈಯಪ್ಪನಹಳ್ಳಿ–ಹೊಸೂರು ಕ್ವಾಡ್ರುಪ್ಲಿಂಗ್ ಯಲಹಂಕ–ದೇವನಹಳ್ಳಿ ದ್ವಿಪಥ ಬೆಂಗಳೂರು–ತುಮಕೂರು ಕ್ವಾಡ್ರುಪ್ಲಿಂಗ್ ಚಿಕ್ಕಬಾಣಾವರ–ಹಾಸನ ಕ್ವಾಡ್ರುಪ್ಲಿಂಗ್ ಬೆಂಗಳೂರು–ಮೈಸೂರು ಕ್ವಾಡ್ರುಪ್ಲಿಂಗ್ ದೇವನಹಳ್ಳಿ–ಬಂಗಾರಪೇಟೆ ಡಬಲಿಂಗ್ ಸರ್ವೆಗಳು ನಡೆಯುತ್ತಿವೆ ಎಂದರು.
ವಂದೇ ಭಾರತ್ ದರ ಪರಿಷ್ಕರಣೆಗೆ ಚಿಂತನೆ
ಕಾರ್ಮಿಕರು, ಕೃಷಿಕರು, ಬಡವರಿಗೂ ಅನುಕೂಲವಾಗುವಂತೆ ವಂದೇ ಭಾರತ್ ಸೇರಿದಂತೆ ವಿವಿಧ ರೈಲುಗಳ ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಇದೇ ವೇಳೆ ಸೋಮಣ್ಣ ಅವರು ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ರೈಲ್ವೆ ಸಚಿವರು, ನಾನು ಬಗ್ಗೆ 2 ಗಂಟೆ ಚರ್ಚೆ ನಡೆಸಿದ್ದೇವೆ. ಅದರಲ್ಲಿ ರೈಲು ದರದ ಪರಿಷ್ಕರಣೆ ಮಾಡುವ ಚಿಂತನೆಯೂ ಸೇರಿತ್ತು. ಹಳ್ಳಿಗಳಿಂದ ಬರುವವರಿಗೂ ಉತ್ತಮ ಸೌಲಭ್ಯ ಇರುವ ವಂದೇ ಭಾರತ್ ರೈಲಿನಲ್ಲಿ ಸಂಚರಿಸಬೇಕು ಎಂಬ ಆಸೆ ಇರುತ್ತದೆ. ಅದು ನೆರವೇರುವ ಕಾಲ ಬರಲಿದೆ ಎಂದರು.