ಪಾಕ್ ಪರ ಘೋಷಣೆ ಪ್ರಕರಣ
ಪಾಕ್ ಪರ ಘೋಷಣೆ ಪ್ರಕರಣ 
ರಾಜ್ಯ

ಪಾಕ್ ಪರ ಘೋಷಣೆ: ಬಂಧಿತರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು, ಓರ್ವ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ

Ramyashree GN

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿರುವ ಮೂವರು ಆರೋಪಿಗಳು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಒಬ್ಬಾತ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದನು ಎಂದು ಮಂಗಳವಾರ ಮೂಲಗಳು ತಿಳಿಸಿವೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬಾತ 'ಪಾಕಿಸ್ತಾನ' ಎಂದು ಕೂಗಿದ್ದಾನೆ ಮತ್ತು ಇನ್ನಿಬ್ಬರು 'ಜಿಂದಾಬಾದ್' ಘೋಷಣೆಗಳನ್ನು ಕೂಗಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ಪರೀಕ್ಷೆಗಳಲ್ಲಿ ಆರೋಪಿಗಳ ಧ್ವನಿ ಮಾದರಿಗಳೊಂದಿಗೆ ಆಡಿಯೋ, ವಿಡಿಯೋ ಮಾದರಿಗಳು ಹೊಂದಾಣಿಕೆಯಾಗುತ್ತಿವೆ ಎಂದು ತಿಳಿಸಿದ್ದಾರೆ.

ಆರೋಪಿ ಮೊಹಮ್ಮದ್ ನಾಶಿಪುಡಿ, ಬ್ಯಾಡಗಿಯ ಶ್ರೀಮಂತ ಮೆಣಸಿನಕಾಯಿ ವ್ಯಾಪಾರಿಯಾಗಿದ್ದು, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ. ಮುನ್ನಾವರ್ ಅಹ್ಮದ್ ಬೆಂಗಳೂರಿನ ಜಯಮಹಲ್ ಪ್ರದೇಶದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ. ಮತ್ತೋರ್ವ ಆರೋಪಿ ಮೊಹಮ್ಮದ್ ಇಲ್ತಾಜ್ ದೆಹಲಿಯ ಕಿಶನ್‌ಗಂಜ್ ಪ್ರದೇಶದವನಾಗಿದ್ದಾನೆ.

ಆರೋಪಿಗಳನ್ನು 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಮಾರ್ಚ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.

ಆರೋಪಿಗಳ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಟೆಲಿಗ್ರಾಂ ಮತ್ತಿತರ ಖಾತೆಗಳಿಂದ ವಿಧಾನಸೌಧ ಠಾಣೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳ ಮೊಬೈಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 40 ಮಂದಿಯನ್ನು ವಿಚಾರಣೆಗೊಳಪಡಿಸಿದ್ದು, 15ಕ್ಕೂ ಹೆಚ್ಚು ಜನರ ಧ್ವನಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫೆಬ್ರುವರಿ 27 ರಂದು ರಾಜ್ಯಸಭೆಯ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್​ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ಸಾಧಿಸಿದ್ದರು. ಈ ಖುಷಿಯಲ್ಲಿ ಅವರ ಬೆಂಬಲಿಗರು ವಿಧಾನಸೌಧದ ಹೊರಗಡೆ ನಡೆಸಿದ ಸಂಭ್ರಮಾಚರಣೆ ವೇಳೆ ಆರೋಪಿಗಳು 'ಪಾಕಿಸ್ತಾನ ಜಿಂದಾಬಾದ್' ಘೋಷಣೆಗಳನ್ನು ಕೂಗಿದ್ದರು.

SCROLL FOR NEXT