ಬೆಂಗಳೂರಿನಲ್ಲಿ ಹಾಡಹಗಲೇ ದುಷ್ಕರ್ಮಿಗಳು ಚಿನ್ನಾಭರಣ ಅಂಗಡಿ ಮೇಲೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ಕೊಡಿಗೆಹಳ್ಳಿಯ ದೇವಿ ನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್ & ಜುವೆಲ್ಲರ್ಸ್‌ನಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಅಂಗಡಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಹಣ ಕೊಡಲು ಒಪ್ಪದ ಮಾಲೀಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗುಂಡಿನ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸಿದ್ದ ದುಷ್ಕರ್ಮಿಗಳು ಪರಾರಿಯಾಗುವ ಭರದಲ್ಲಿ ಪಿಸ್ತೂಲನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಕೊಡಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜುವೆಲ್ಲರಿಯ ಸಿಸಿಟಿವಿ ಮತ್ತು ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ.
ಬಿಜೆಪಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ 20 ಲೋಕಸಭೆ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು ಈ ಬಾರಿ ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅದರಂತೆ ದಾವಣಗೆರೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಬದಲಿಗೆ ಅವರ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಬಾರಿ ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಿ ಸಿದ್ದೇಶ್ವರ್ ಅವರ ಪತ್ನಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು ಅವರ ಬೆಂಬಲಿಗನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿರುವ ಎಸ್.ಎ.ರವೀಂದ್ರನಾಥ್ ನಿವಾಸದ ಬಳಿಯೇ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೆ, ಸಿದ್ದರೇಶ್ವರ್ ಅವರ ಪತ್ನಿಗೆ ದಾವಣಗೆರೆ ಟಿಕೆಟ್ ನೀಡಿದ್ದಕ್ಕೆ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬಿಡಿಎ ಕಚೇರಿ ಬಳಿಯ ತ್ರಿಸ್ಟಾರ್ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನ್ ಮೂಲದ 37 ವರ್ಷದ ಮಹಿಳೆ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಂತ್ರಸ್ತೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದರು ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಹೋಟೆಲ್‌ನಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು. ಸಂತ್ರಸ್ತೆಯನ್ನು ಕತ್ತು ಹಿಸುಕಿ ಅಥವಾ ಉಸಿರುಗಟ್ಟಿಸಿ ಸಾಯಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲ್ಲುವ ಮೊದಲು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ. ಸಂತ್ರಸ್ತೆಯನ್ನು ಜರೀನಾ ಎಂದು ಪೊಲೀಸರು ಗುರುತಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರಿಗೆ ಕಳೆದ ರಾತ್ರಿ ಕುಣಿಗಲ್ ತಾಲ್ಲೂಕಿನ ಕೋಡಿಹಳ್ಳಿ ಪಾಳ್ಯಗೇಟ್ ಬಳಿ ಆಟೋ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ 44 ವರ್ಷದ ಜಗದೀಶ್ ಎಂಬುವರು ಇಂದು ಬೆಳಿಗ್ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತುಕಾಲಿ ಸಂತೋಷ್, ಪತ್ನಿ ಮಾನಸ ತುಮಕೂರಿನಿಂದ ಹೊಳೆನರಸೀಪುರದತ್ತ ತಮ್ಮ ನೂತನ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 7ರಂದು ನಡೆದ ದ್ವಿತೀಯ ಪಿಯುಸಿ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತದೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆ ಬಗ್ಗೆ ಪಿಯು ಮಂಡಳಿ ಸ್ಪಷ್ಟನೆ ನೀಡಿದ್ದು, ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಕಷ್ಟಕರವಾಗಿದ್ದರಿಂದ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇದು ಕೇವಲ ವದಂತಿ ಅಷ್ಟೇ, ಯಾವುದೇ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತಿಲ್ಲ. ಮಾರ್ಚ್ 10ರಂದು ಹೊರಡಿಸಿದ್ದ ಸುತ್ತೋಲೆ ನಕಲಿ ಎಂದು ಮಂಡಳಿ ತಿಳಿಸಿದೆ. ನಾವು ಇದುವರೆಗೆ ಗ್ರೇಸ್ ಅಂಕ ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪಿಯುಸಿ ಪರೀಕ್ಷೆಗಳ ನಿರ್ದೇಶಕ ಗೋಪಾಲಕೃಷ್ಣ ಎಚ್ಎನ್ ತಿಳಿಸಿದ್ದಾರೆ.