ಸಂಗ್ರಹ ಚಿತ್ರ 
ರಾಜ್ಯ

BSY ವಿರುದ್ಧ ಮಹಿಳೆ ದೂರು!, ಪಾಕ್ ಪರ ಘೋಷಣೆ ಆರೋಪಿಗಳಿಗೆ ಜಾಮೀನು: ಈ ದಿನದ ಪ್ರಮುಖ ಸುದ್ದಿಗಳು-15-03-2024

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಫೆಬ್ರವರಿ 2 ರಂದು ಯಡಿಯೂರಪ್ಪ ಬಳಿ ಸಹಾಯ ಕೇಳಲು ಹೋಗಿದ್ದಾಗ ತನ್ನ ಮಗಳು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಹಿಳೆಯೊಬ್ಬರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದ ಸಂತ್ರಸ್ತೆ ಬಾಲಕಿ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಈ ಅರೋಪ ನಿರಾಧಾರವಾಗಿದೆ. ಯಾರೋ ಒಬ್ಬ ಹೆಣ್ಣು ಮಗಳು ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದರು. ತಾಯಿ- ಮಗಳು ಅನೇಕ ಬಾರಿ ಬಂದು ಹೋಗುತ್ತಿದ್ದರು. ನಾನು ಪೊಲೀಸರಿಗೆ ಕರೆ ಮಾಡಿ ನ್ಯಾಯ ಒದಗಿಸುವಂತೆ ಹೇಳಿದೆ. ಆದರೆ, ಮಹಿಳೆ ನನ್ನ ಮೇಲೆಯೇ ಏನೇನೋ ಮಾತಾಡೋಕೆ ಶುರು ಮಾಡಿದಳು ಎಂದು ಹೇಳಿದ್ದಾರೆ. ನಾನು ಸಹಾಯ ಮಾಡಲು ಪ್ರಯತ್ನಿಸಿದೆ. ಆದರೆ, ಅವರು ನನ್ನ ವಿರುದ್ಧವೇ ಆರೋಪ ಮಾಡಿದ್ದಾರೆ. ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ಗೃಹ ಇಲಾಖೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ತನಿಖೆ ಮಾಡುತ್ತೇವೆ. ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು, ತನಿಖೆಯ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ. ತನಿಖೆ ಆಗುವವರೆಗೆ ಯಾವುದೇ ವಿಷಯ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಔಟರ್ ರಿಂಗ್ ರೋಡ್ ಒಳಗೊಂಡ ಮೆಟ್ರೋ 3ನೇ ಹಂತದ ಮಾರ್ಗಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲು ಹಾಗೂ ವಿಧಾನಸೌಧದ ಆವರಣದಲ್ಲಿ 23 ಕೋಟಿ‌ ರೂ. ವೆಚ್ಚದಲ್ಲಿ‌ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ನಿರ್ಧಾರಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಂದಾಯ‌ ಸಚಿವ ಕೃಷ್ಣಬೈರೇಗೌಡ, ಮೆಟ್ರೋ 3ನೇ ಹಂತದಲ್ಲಿ 44.65 ಕಿ.ಮೀ ಮಾರ್ಗವನ್ನು 15,611 ಕೋಟಿ ರೂ.ವೆಚ್ಚದಲ್ಲಿ‌ ಕೈಗೆತ್ತುಕೊಳ್ಳಲು‌ ಸಂಪುಟ ಒಪ್ಪಿಗೆ ನೀಡಿದೆ 2028 ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು, ಕಡಬ ವೆಟರ್ನರಿ‌ ಕಾಲೇಜಿನ ಅಭಿವೃದ್ದಿಗೆ 163 ಕೋಟಿ ರೂ., ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಹೊಸ ಹಾಸ್ಟೆಲ್​ ನಿರ್ಮಾಣಕ್ಕೆ 170 ಕೋಟಿ ರೂ. ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, 373 ರ ಯೆಡೇಗೌಡನಹಳ್ಳಿಯಿಂದ ಅರ್ಜುನಹಳ್ಳಿ ಭಾಗದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 576.22 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ 22.3 ಕಿಮೀ ಉದ್ದದ ಕಾರಿಡಾರ್ ಪ್ರಸಿದ್ಧ ಪ್ರವಾಸಿ ತಾಣಗಳಾದ ಚಿಕ್ಕಮಗಳೂರು, ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳಕ್ಕೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರಿಗೆ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿಗಳು ರೂ.1 ಲಕ್ಷ ಮೊತ್ತದ ಮುಚ್ಚಳಿಕೆ ನೀಡಬೇಕು, ಇಬ್ಬರು ವ್ಯಕ್ತಿಗಳು ಜಾಮೀನು ಒದಗಿಸಬೇಕು, ಆರೋಪಿಗಳು ದೇಶ ಬಿಟ್ಟು ಹೋಗಬಾರದು, ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಇದು ಮೇಲ್ನೋಟಕ್ಕೆ ಸಾಕ್ಷ್ಯವೇ ಇಲ್ಲದ ಪ್ರಕರಣ ಎಂಬುದು ಸಾಬೀತಾಗುತ್ತದೆ ಎಂಬ ಅಂಶಗಳನ್ನು ಪರಿಗಣಿಸಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಧಾರವಾಡದಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕೃತ ಚಾಲನೆ ನೀಡಿದರು. ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಹಠಾತ್ ಹೃದಯಘಾತ ಆಗದಂತೆ ಜೀವರಕ್ಷಕ ಚುಚ್ಚುಮದ್ದುಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯಾಘಾತ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟೆಪ್ಲೇಸ್ ಅನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಉಚಿತವಾಗಿ ಪಡೆಯಬಹುದಾಗಿದೆ. ಗ್ರಾಮೀಣ ಪ್ರದೇಶದ ಜನರು ಇದರ ಉಪಯೋಗ ಪಡೆಯವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಭಯೋತ್ಪಾದನೆ ಜಾಗತಿಕ ಶಾಂತಿಗೆ ಅತಿದೊಡ್ಡ ಬೆದರಿಕೆ': SCO ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ, ಅದನ್ನು ನಿಲ್ಲಿಸಬೇಕು: White House ವ್ಯಾಪಾರ ಸಲಹೆಗಾರ ಪೀಟರ್ ನವರೊ

SCO ಶೃಂಗಸಭೆ 2025: ಅಮೆರಿಕಾ 'ಬೆದರಿಕೆ ವರ್ತನೆ'ಗೆ ಚೀನಾ ಖಂಡನೆ, ಡೊನಾಲ್ಡ್ ಟ್ರಂಪ್ ವಿರುದ್ಧ ಕ್ಸಿ ಜಿನ್‌ಪಿಂಗ್ ಪರೋಕ್ಷ ವಾಗ್ದಾಳಿ

SCO ಶೃಂಗಸಭೆ 2025: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಳಿಕ ರಷ್ಯಾ ಅಧ್ಯಕ್ಷರ ಭೇಟಿಯಾದ ಪ್ರಧಾನಿ ಮೋದಿ, ತೀವ್ರ ಕುತೂಹಲ..!

ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾದ ಚಿಕ್ಕಣ್ಣ: ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ; ಹಾಸ್ಯನಟನ ಕೈ ಹಿಡಿಯೋ ಹುಡುಗಿ ಯಾರು?

SCROLL FOR NEXT