ಬೆಂಗಳೂರು: ಮೊಬೈಲ್ ಶಾಪ್ ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರುಗೇಟ್ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ನಗರತ್ಪೇಟೆಯಲ್ಲಿರುವ ಮೊಬೈಲ್ ಶಾಪ್ನಲ್ಲಿ ಯುವಕ ಹುನುಮಾನ್ ಚಾಲಿಸಾ ಹಾಕಿ, ಜೋರು ಸೌಂಡ್ ಇಟ್ಟಿದ್ದರು. ಈ ವೇಳೆ ಅಂಗಡಿಗೆ ಬಂದ ಆರು ಜನ ಯುವಕರು ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ ಜೋರು ಸೌಂಡ್ ಇಟ್ಟು ಹಾಡು ಹಾಕಬೇಡ ಎಂದಿದ್ದರು. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ನಂತರ ಆರು ಜನ ಯುವಕರು ಅಂಗಡಿಯಲ್ಲಿದ್ದ ಯುವಕ ಮುಖೇಶ್ ಅವರ ಕೊರಳ ಪಟ್ಟಿ ಹಿಡಿದು, ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಗಾಯಗೊಂಡ ಮುಖೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ಬೆನ್ನಲ್ಲೇ ನಿನ್ನೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇಂದು ಮತ್ತಿಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್, ತರುಣ್ ಎಂದು ಗುರ್ತಿಸಲಾಗಿದೆ.