ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಬಿಜೆಪಿಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಶುಕ್ರವಾರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತೆ ಸಾರ್ವಜನಿಕರ ಜೀವ ರಕ್ಷಣೆ ಮಾಡಬೇಕಾದ ಆರೋಗ್ಯ ಇಲಾಖೆಯೇ ಭ್ರೂಣ ಪತ್ತೆ-ಹತ್ಯೆ ಜಾಲದಲ್ಲಿ ಶಾಮೀಲಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ತನಿಖಾಧಿಕಾರಿಗಳು ಭ್ರೂಣ ಹತ್ಯೆ ಪ್ರಕರಣದ ವರದಿ ಸಲ್ಲಿಸಬಾರದು ಎಂದು ಇಷ್ಟೊಂದು ಒತ್ತಡ ಹೇರುತ್ತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಯಾರ ಕುಮ್ಮಕ್ಕಿದೆ, ಯಾವ ಬೆಂಬಲದಿಂದ ಅಧಿಕಾರಿಗಳ ಈ ಕಳ್ಳಾಟ ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೆಲ್ಲಾ ನೋಡುತ್ತಿದ್ದರೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಅಮಾನುಷ ಭ್ರೂಣ ಪತ್ತೆ-ಹತ್ಯೆ ಜಾಲವನ್ನು ಬೇಧಿಸಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ ಕಾಣದ 'ಕೈ'ಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ ಎಂದು ಅಶೋಕ ಹೇಳಿದ್ದಾರೆ.
ಈ ಪ್ರಕರಣದ ಆಳ-ಅಗಲ, ಗಂಭೀರತೆ ಮತ್ತು ಇದರ ಹಿಂದಿರುವ ಪ್ರಭಾವಿ ಶಕ್ತಿಗಳನ್ನು ಅಂದಾಜಿಸಿಯೇ ನಾನು ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು, ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಒತ್ತಾಯಿಸಿದ್ದೆ ಎಂದು ಅವರು ಹೇಳಿದರು.
ಮಹಿಳೆಯರ ವೋಟಿಗಾಗಿ ಅವರ ಮೂಗಿಗೆ ತುಪ್ಪ ಸವರುವ ಶಕ್ತಿ, ಗೃಹಲಕ್ಷ್ಮಿ ಗ್ಯಾರಂಟಿಗಳನ್ನು ನೀಡಿದರೆ ಮಹಿಳೆಯರ ಸಬಲೀಕರಣ ಆಗುವುದಿಲ್ಲ ಸಿಎಂ ಸಿದ್ದರಾಮಯ್ಯನವರೆ. ಹುಟ್ಟುವ ಮೊದಲೇ ಹೆಣ್ಣು ಮಕ್ಕಳ ಪ್ರಾಣ ಕಸಿದುಕೊಳ್ಳುವ ಈ ಅಮಾನುಷ ಜಾಲವನ್ನು ಭೇದಿಸುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ತಮ್ಮ ನಿಜವಾದ ಬದ್ಧತೆ ತೋರಿಸಿ ಎಂದರು.
ಡಿಎಚ್ಒ ವಿರುದ್ಧ ದೂರು
ಬೆಂಗಳೂರು ಸಮೀಪದ ಹೊಸಕೋಟೆ ಮತ್ತು ನೆಲಮಂಗಲ ಪಟ್ಟಣಗಳಲ್ಲಿ ಇತ್ತೀಚೆಗೆ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಕ್ಕೆ ಸಂಬಂಧಿಸಿದ ವರದಿಯನ್ನು ನೀಡದಂತೆ ತಮ್ಮ ಮೇಲೆ ಒತ್ತ ಹೇರಲಾಗುತ್ತಿದೆ ಎಂದು ಆರೋಪಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್‌ಆರ್ ಮಂಜುನಾಥ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಬುಧವಾರ ದೂರು ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ತಮಗೆ ನೀಡದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್ಒ) ಡಾ. ಸುನೀಲ್ ಕುಮಾರ್ ಅವರು ತಮ್ಮ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ವರದಿ ನೀಡಿದರೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು, ಈ ಒತ್ತಡವನ್ನು ತಾಳಲಾರದೆ ಏನಾದರೂ ಪ್ರಾಣಾಪಾಯ ಸಂಭವಿಸಿದರೆ ಡಿಎಚ್ಒ ಅವರೇ ನೇರ ಹೊಣೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.