ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಮಹದೇವಪುರ ವಲಯದಲ್ಲಿ ನೀರಿನ ಕೊರತೆ ನೀಗಿಸಲು ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ತುಷಾರ್‌ ಗಿರಿನಾಥ್‌ ಸೂಚನೆ

Manjula VN

ಬೆಂಗಳೂರು: ಮಹದೇವಪುರ ವಲಯದ 42 ಗ್ರಾಮಗಳಿಗೆ ನೀರಿನ ಕೊರತೆ ನೀಗಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿದ್ದಾರೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ವಲಯ ಕಚೇರಿಯಲ್ಲಿ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ೃಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಅಳವಡಿಸಿ ಜಲಮಂಡಳಿಯಿಂದ ನೀರಿನ ಪೂರೈಕೆ ಮಾಡಬೇಕು ಎಂದು ಹೇಳಿದರು.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ 46 ಶುದ್ಧ ಕುಡಿಯುವ ನೀರಿನ ಘಕಟಗಳು ಬರಲಿದ್ದು, 42 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 4 ಘಟಕಗಳು ಸ್ಥಗಿತಗೊಂಡಿದ್ದು, ಸದ್ಯ ಇರುವ ಘಟಕಗಳಿಗೆ ಕೂಡಲೇ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಿಕೊಂಡು ನೀರಿನ ಪೂರೈಕೆ ಮಾಡಬೇಕು ಎಂದು ತಿಳಿಸಿದರು.

ಜಲಮಂಡಳಿಯ ಜಲಗಾರಗಳಲ್ಲಿ ಏಕ ಕಾಲದಲ್ಲಿ ಮೂರು/ನಾಲ್ಕು ಟ್ಯಾಂಕರ್ ಗಳಿಗೆ ನೀರು ಪೂರೈಕೆ ಮಾಡುವ ಹಾಗೇ ಪೈಪ್ ಅಳವಡಿಸಿಕೊಂಡು ನೀರಿನ ಸಮಸ್ಯೆಯಿರುವ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಎಷ್ಟು ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ, ಎಷ್ಟು ಬತ್ತಿ ಹೋಗಿವೆ. ಎಷ್ಟು ಕೊಳವೆ ಬಾವಿಗಳಿಗೆ ವಿದ್ಯುತ್ ಸಮಸ್ಯೆಯಿದೆ. ಯಂತ್ರಗಳು ಹಾಳಾಗಿವೆ, ಎಲ್ಲೆಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಬೇಕಿದೆ ಎಂಬುದನ್ನು ಸರಿಯಾಗಿ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್‌ಗಳನ್ನು ಆಯಾ ವಲಯವಾರು ನಿಯೋಜಿಸಲಾಗಿದ್ದು, ನೋಂದಣಿಯಾಗಿರುವ ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಸ್ಟಿಕರ್‌ಗಳನ್ನು ಅಂಟಿಸಿಕೊಳ್ಳಬೇಕಿದೆ. ಪ್ರತಿ ಟ್ಯಾಂಕರ್ ಮಾಲೀಕರು ಸ್ವಂ ನೋಂದಣಿ ಮಾಡಿಕೊಂಡಿರುವ ನೋಂದಣಿ ಪ್ರಮಾಣ ಪತ್ರವನ್ನು ಹಾಗೂ ಪಾಲಿಕೆ ನೀಡಿರುವ ಸ್ಟಿಕರ್‌ನಲ್ಲಿ ವಾಹನದ ಸಂಖ್ಯೆ, ಮಾಲೀಕರ ಹೆಸರು, ದೂರವಾಣಿ ಸಂಖ್ಯೆ ಹಾಗೂ ಸ್ವಂ ನೋಂದಣಿಯಾಗಿರುವ ಸಂಖ್ಯೆಯನ್ನು ಹಾಗೂ ವಲಯದ ಹೆಸರು ನಮೂದಿಸಿ ವಾಹನದ ಮೇಲೆ ಕಡ್ಡಾಯವಾಗಿ ಅಂಟಿಸಬೇಕು. ಸ್ಟಿಕ್ಕರ್ ಅಂಟಿಸದಿರುವ ಟ್ಯಾಂಕರ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಏರೇಟರ್‌ಗಳ ಅಳವಡಿಸಿಕೊಳ್ಳದಿದ್ದರೆ ರೂ 5 ಸಾವಿರ ದಂಡ

ಸರ್ಕಾರಿ ಕಚೇರಿ, ಚಿತ್ರಮಂದಿರ, ಐಷಾರಾಮಿ ಹೋಟೆಲ್‌ಗಳು, ಸಮುದಾಯ ಭವನಗಳು, ಕೈಗಾರಿಕಾ ಕ್ಷೇತ್ರ, ಅಪಾರ್ಟ್‌ಮೆಂಟ್‌ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಮಾರ್ಚ್ 31 ರೊಳಗೆ ಏರೇಟರ್ ಅಥವಾ ನೀರಿನ ಹರಿವಿನ ನಿರ್ಬಂಧಕಗಳನ್ನು ಅಳವಡಿಸುವ ಆದೇಶವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಬುಧವಾರ ಪ್ರಕಟಿಸಿದೆ.

ಮಾರ್ಚ್ 31 ರೊಳಗೆ ಏರೇಟರ್ ಅಳವಡಿಸಿಕೊಳ್ಳದವರಿಗೆ ರೂ.5,000 ದಂಡವನ್ನು ವಿಧಿಸಲಾಗುತ್ತದೆ. ನಂತರ ಕೂಡ ನಿಯಮ ಪಾಲಿಸದವರಿಗೆ ಪ್ರತೀನಿತ್ಯ ರೂ.500 ದಂಡ ವಿಧಿಸಲಾಗುತ್ತದೆ. ನಂತರ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳೇ ಏರೇಟರ್ ಗಳ ಅಳವಡಿಸಿ, ಅದಕ್ಕೆ ತಗುಲುವ ವೆಚ್ಚವನ್ನು ಜನರಿಂದ ಸಂಗ್ರಹಿಸುತ್ತಾರೆಂದು ತಿಳಿಸಿದೆ.

ಈ ಮಧ್ಯೆ ವಿದ್ಯಾರಣ್ಯಪುರ ನಿವಾಸಿಯೊಬ್ಬರು ತಮ್ಮ ಕಾರು ತೊಳೆಯಲು ಕುಡಿಯುವ ನೀರ ಬಳಸಿದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಮಂಡಳಿಯು ದಂಡ ವಿಧಿಸಿದೆ.

SCROLL FOR NEXT