ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಅಮಿತ್ ಶಾ 'ಗೂಂಡಾ' ಯತೀಂದ್ರ ವಿರುದ್ಧ ದೂರು. 'ಬಾಂಬರ್' ಫೋಟೋ ಬಿಡುಗಡೆ. PTI ವರದಿಗಾರ್ತಿ ಕೆನ್ನೆಗೆ ಹೊಡೆದ ANI ವರದಿಗಾರ! - ಈ ದಿನದ ಸುದ್ದಿ ಮುಖ್ಯಾಂಶಗಳು: 29-03-2024

Vishwanath S

RameshwaramCafeBlast ಬಾಂಬರ್ ಮುಸಾವೀರ್ ಉಗ್ರ ಅಬ್ದುಲ್ ಮತೀನ್ ಫೋಟೋ ಬಿಡುಗಡೆ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಮುಸಾವೀರ್ ಹುಸೈನ್ ಶಾಜೀಬ್ ಹಾಗೂ ಉಗ್ರ ಅಬ್ದುಲ್ ಮತೀನ್ ಅಹ್ಮದ್ ತಾಹನ ಫೋಟೋ ಬಿಡುಗಡೆ ಮಾಡಿರುವ ಎನ್ಐಎ ಇವರ ಸುಳಿವು ನೀಡುವವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ನಿನ್ನೆಯಷ್ಟೇ ಎನ್ಐಎ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಆರೋಪಿ ಮುಜಾಮಿಲ್ ಶರೀಫ್ ಎಂಬಾತನನ್ನು ಬಂಧಿಸಿತ್ತು. ಇಂದು ಮುಜಾಮಿಲ್ ಶರೀಫ್‌ನನ್ನು 7 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿದೆ. ಬಾಂಬ್‌ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಜಾಮಿಲ್ ಶರೀಫ್ ಇತರ ಉಳಿದ ಆರೋಪಿಗಳ ಜೊತೆ ಸಂಪರ್ಕದ ಹೊಂದಿದ್ದ ಬಗ್ಗೆಯೂ ಎನ್‌ಐಎ ಮಾಹಿತಿ ಸಂಗ್ರಹಿಸಿತ್ತು.

ಬಿಜೆಪಿ ಹಾಗೂ ಜೆಡಿಎಸ್‌ ಸಮನ್ವಯ ಸಭೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಸಮನ್ವಯ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಿತು. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್. ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, 28 ಕ್ಷೇತ್ರ ಗೆಲ್ಲೋದು ನಮ್ಮ ಗುರಿಯಾಗಿದೆ. ಪರಸ್ಪರ ಮಾತನಾಡಿಕೊಂಡು ಕೆಲಸ ಮಾಡಬೇಕು ಎಂದು ಮೈತ್ರಿ ಪಕ್ಷಗಳ ನಾಯಕರಿಗೆ ಕರೆ ನೀಡಿದರು. ಇದೇ ವೇಳೆ ಮಾತನಾಡಿದ ಬಿ.ವೈ ವಿಜಯೇಂದ್ರ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಆಶೀರ್ವಾದ ನಮಗೆ ಆನೆ ಬಲ ತಂದಿದೆ. ಈ ಸಮ್ಮಿಲನ ಉತ್ತಮ ಫಲಿತಾಂಶ ನೀಡಲಿದೆ ಎಂದರು.

PIT ವರದಿಗಾರ್ತಿ ಕಪಾಳಕ್ಕೆ ಹೊಡೆದ ANI ವರದಿಗಾರ: ಪ್ರಕರಣ ದಾಖಲು

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆ ವರದಿಗೆ ಬಂದಿದ್ದ ಪತ್ರಕರ್ತರಿಬ್ಬರು ಕಿತ್ತಾಡಿಕೊಂಡಿದ್ದಾರೆ. ಪಿಟಿಐ ವರದಿಗಾರ್ತಿ ಎಲಿಜಬೆತ್ ಕುರಿಯನ್ ಅವರ ಮೇಲೆ ಎಎನ್‌ಐ ವರದಿಗಾರ ರಾಘವೇಂದ್ರ ರಾವ್ ಅವರು ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುರೇಶ್ ಅವರ ಪಕ್ಕವೇ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಇಬ್ಬರೂ ದೂರು–ಪ್ರತಿ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಸುರೇಶ್ ಭಾಷಣ ಮಾಡುವಾಗ ಮೈಕ್ ಹಿಡಿಯುವ ವಿಚಾರಕ್ಕೆ ಇಬ್ಬರ ನಡುವೆ ತಳ್ಳಾಟ ಮತ್ತು ಮಾತಿನ ಚಕಮಕಿ ನಡೆದಿದ್ದು ನಂತರ ರಾಘವೇಂದ್ರ ಎಲಿಜಬೆತ್ ಕೆನ್ನೆಗೆ ಹೊಡೆದಿದ್ದರು ಎನ್ನಲಾಗಿದೆ.

Amitshah ಓರ್ವ ಗೂಂಡ ಎಂದ ಯತೀಂದ್ರ ವಿರುದ್ಧ BJP ದೂರು

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಹನೂರಿನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಯತೀಂದ್ರ ಅಮಿತ್ ಶಾರನ್ನು ಗೂಂಡಾ ಎಂದು ಕರೆದಿದ್ದು, ಶಾ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಆರೋಪಿಸಿದ್ದರು. ಗುಜರಾತ್ನಶಲ್ಲಿ ನರಮೇಧ ಮಾಡಿದವರು ಯಾರು? ಇಂತಹವರು ಈಗ ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಕ್ರಿಮಿನಲ್ ಚಟುವಟಿಕೆಯುಳ್ಳ ಇಂತಹವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಈ ಸಂಬಂಧ ಯತೀಂದ್ರ ವಿರುದ್ಧ ಬಿಜೆಪಿ ದೂರು ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ, ರೌಡಿ ಸಂಸ್ಕೃತಿ ಇರುವುದು ಕಾಂಗ್ರೆಸ್‌ನಲ್ಲಿ. ಟಿಕೆಟ್ ಕೈತಪ್ಪಿದ್ದರಿಂದ ಯತೀಂದ್ರ ಹತಾಶೆಗೊಂಡಿದ್ದು ಹೀಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿ-ಫಾರಂ ವಿತರಿಸಿದ ಡಿಕೆ ಶಿವಕುಮಾರ್

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ತಮ್ಮ ನಿವಾಸದಲ್ಲಿ ಬಿ-ಫಾರಂ ವಿತರಿಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ಸ್ಪರ್ಧಿಸುತ್ತಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಸೇರಿದಂತೆ ಹಲವರು ಬಿ-ಫಾರಂ ಪಡೆದರು.

SCROLL FOR NEXT