ರಾಜ್ಯ

ಕೋಲಾರ: ಕೆವಿ ಗೌತಮ್ ಕೈ ಅಭ್ಯರ್ಥಿ; ಏ.3ಕ್ಕೆ ಸುಮಲತಾ ನಿರ್ಧಾರ, ಬಿಲ್ಡರ್ಸ್, ಡಿಕೆಶಿಗೆ ಐಟಿ ಶಾಕ್: ಈ ದಿನದ ಸುದ್ದಿ ಮುಖ್ಯಾಂಶಗಳು 30-03-2024

ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಿಂದ ಬೆಂಗಳೂರಿನ ಮಾಜಿ ಮೇಯರ್ ಕೆ.ಸಿ.ವಿಜಯಕುಮಾರ್ ಪುತ್ರ ಕೆ.ವಿ.ಗೌತಮ್ ಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಿಸಿದೆ.

ಬೆಂಗಳೂರು: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಿಂದ ಬೆಂಗಳೂರಿನ ಮಾಜಿ ಮೇಯರ್ ಕೆ.ಸಿ.ವಿಜಯಕುಮಾರ್ ಪುತ್ರ ಕೆ.ವಿ.ಗೌತಮ್ ಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಿಸಿದೆ. ಕೋಲಾರ ಕ್ಷೇತ್ರದಿಂದ ಮುನಿಯಪ್ಪ ತಮ್ಮ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ ಮುನಿಯಪ್ಪ ಕುಟುಂಬದವರಿಗೆ ಟಿಕೆಟ್ ನೀಡುವುದಕ್ಕೆ ಶಾಸಕ ರಮೇಶ್ ಕುಮಾರ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈಗ ಸಚಿವ .ಎಚ್.ಮುನಿಯಪ್ಪ ಅವರ ನಡೆ ಏನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಈಮಧ್ಯೆ, ಬಿಜೆಪಿಯಿಂದ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಂಡ್ಯ ಸಂಸದೆ ಸುಮಲತಾ ತಾವು ಯಾವುದೇ ಪಕ್ಷಕ್ಕಿಂತ ಅಂಬರೀಶ್‌ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಇಂದು ತಿಳಿಸಿದರು. ಬೆಂಗಳೂರಿನ ಜೆಪಿ ನಗರದ ನಿವಾಸದ ಬಳಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ನಮ್ಮ ಬೆಂಬಲಿಗರು, ಅಂಬರೀಶ್‌ ಅವರ ಅಭಿಮಾನಿಗಳು ಇಲ್ಲಿಗೆ ಬಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್‌ 3 ರಂದು ಮಂಡ್ಯದಲ್ಲಿಯೇ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.

ಬಿಲ್ಡರ್ಸ್ ಗಳಿಗೆ ಸೇರಿದ ಸುಮಾರು 20 ಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಲ್ಡರ್‌ಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ಏಕಕಾಲದ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ಕೈಗೊಂಡಿದ್ದಾರೆ. ಕೆ.ಆರ್. ಪುರಂ ಸಮೀಪದ ಕೊಡಿಗೇಹಳ್ಳಿಯ ನಂಜುಂಡೇಶ್ವರ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸೇರಿ ಹಲವು ಪ್ರಮುಖ ಬಿಲ್ಡರ್‌ ಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ತೆರಿಗೆ ವಂಚನೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ರಾಜಕೀಯ ನಾಯಕರಿಗೆ ಫಂಡಿಂಗ್ ಮಾಡುತ್ತಿರುವ ಕುರಿತು ಐಟಿ ಇಲಾಖೆಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಐಟಿ ಇಲಾಖೆ ನೊಟೀಸ್ ಜಾರಿಗೊಳಿಸಿದೆ. ಈ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, ಈಗಾಗಲೇ ಬಗೆಹರಿದ ವಿಚಾರಕ್ಕೆ ನಿನ್ನೆ ರಾತ್ರಿ ನನಗೂ ಐಟಿ ನೋಟಿಸ್ ಬಂದಿದೆ. ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನಾಯಕರ ಮೇಲೂ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ ಅವರನ್ನು ವಿಚಾರಣೆಗೆ ಕರೆಯುವುದಿಲ್ಲ. ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ, ಕಾನೂನು ಇದೆ. ಬಿಜೆಪಿ ಸರ್ಕಾರ ಅಧಿಕಾರಿಗಳಿಗೆ ಇಂತಹ ಸೂಚನೆ ನೀಡುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿನ ಮೆಟ್ರೋ ಕಾಮಗಾರಿ ನಿರ್ವಹಣೆಯ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಏಪ್ರಿಲ್ 1ರಿಂದ ಮುಂದಿನ ವರ್ಷ 2025 ಮಾರ್ಚ್ 30ರವರೆಗೆ ಸಂಪೂರ್ಣವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ BMRCL ಮಾಹಿತಿ ಹಂಚಿಕೊಂಡಿದ್ದು, ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು ಆನೆಪಾಳ್ಯ ಜಂಕ್ಷನ್ ಕಡೆಗೆ ಚಲಿಸಬೇಕಾದ ವಾಹನಗಳು ಮೈಕೋ ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ ಭೋಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಚಲಿಸಬೇಕು. ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನ ಸಂಚಾರದಲ್ಲಿ ಯಾವುದೆ ವ್ಯತ್ಯಯವಿರುವುದಿಲ್ಲ. ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನ್‌ನ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳುವುದು ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT