2ನೇ ರ್ಯಾಂಕ್ ಪಡೆದ ಮೇಧಾ ಪಿ ಶೆಟ್ಟಿ ಹೋಲಿ ಚೈಲ್ಡ್ ಪ್ರೌಢಶಾಲೆಯಲ್ಲಿ ಶಿಕ್ಷಕರೊಂದಿಗೆ ಸಂಭ್ರಮಿಸುತ್ತಿರುವುದು 
ರಾಜ್ಯ

ಈ ಬಾರಿ SSLC ಮಕ್ಕಳಿಗೆ 20 ಪರ್ಸೆಂಟ್ ವರೆಗೆ ಗ್ರೇಸ್ ಮಾರ್ಕ್ಸ್‌; ಆದರೂ ಫಲಿತಾಂಶ ಕಳಪೆ, ಶೇ.10 ಕುಸಿತ!

2023-24ನೇ ಸಾಲಿನ ಎಸ್ಎಸ್ಎಲ್'ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಒಟ್ಟಾರೆ ಶೇ.73.40ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಗಿಂತ ಶ.10.49ರಷ್ಟು ಫಲಿತಾಂಶ ಕಡಿಮೆಯಾಗುವ ಜೊತೆಗೆ ಐದು ವರ್ಷಗಳ ಹಿಂದಕ್ಕೆ ಫಲಿತಾಂಶ ಜಾರಿದೆ.

ಬೆಂಗಳೂರು: ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾದ 2023-24ನೇ ಸಾಲಿನ ಎಸ್ಎಸ್ಎಲ್'ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಒಟ್ಟಾರೆ ಶೇ.73.40ರಷ್ಟು ಫಲಿತಾಂಶ ದಾಖಲಾಗಿದೆ. ಈ ಮೂಲಕ ಕಳೆದ ಬಾರಿಗಿಂತ ಶ.10.49ರಷ್ಟು ಫಲಿತಾಂಶ ಕಡಿಮೆಯಾಗುವ ಜೊತೆಗೆ ಐದು ವರ್ಷಗಳ ಹಿಂದಕ್ಕೆ ಫಲಿತಾಂಶ ಜಾರಿದೆ.

ವಿಶೇಷವೆಂದರೆ ಇದುವರೆಗೆ ಶೇ.10ರಷ್ಟಿದ್ದ ಗ್ರೇಸ್ ಅಂಕದ ಪ್ರಮಾಣವನ್ನು ಶೇ.20ಕ್ಕೆ ಹೆಚ್ಚಿಸುವ ಜೊತೆಗೆ ಗ್ರೇಸ್ ಅಂಕ ಪಡೆಯಲು ಯಾವುದಾದರೂ ಮೂರು ವಿಷಯಗಳಲ್ಲಿ ಪಾಸ್ ಅಂಕದ ಜೊತೆಗೆ ಎಲ್ಲಾ ಆರೂ ವಿಷಯಗಳಿಂದ ಕಡ್ಡಾಯವಾಗಿ ಶೇ.35ರಷ್ಟು (175 ಅಂಕ) ಗಳಿಸಬೇಕಿದ್ದ ಅಂಕಗಳ ಪ್ರಮಾಣವನ್ನು ಶೇ.25ಕ್ಕೆ (125 ಅಂಕ) ಇಳಿಸಿದ ಪರಿಣಾಮ 1.23 ಲಕ್ಷ (ಶೇ.20) ವಿದ್ಯಾರ್ಥಿಗಳು ಗ್ರೇಸ್ ಅಂಕದಿಂದಲೇ ಪಾಸಾಗುವುದರೊಂದಿಗೆ ಒಟ್ಟಾರೆ ಫಲತಾಂಶ ಶೇ.73.40ರಷ್ಟು ಬಂದಿದೆ. ಇಲ್ಲದೆ ಹೋಗಿದ್ದರೆ ಫಲಿತಾಂಶ ಸುಮಾರು ಶೇ.53.40ರಷ್ಟು ಮಾತ್ರವೇ ಬರುತ್ತಿತ್ತು. ಇದರಿಂದ ಕಳೆದ ವರ್ಷದ ಫಲಿತಾಂಶ ಕುಸಿತವಾಗಿ ಸರ್ಕಾರ ತೀವ್ರ ಮುಜುಗರ ಅನುಭವಿಸಬೇಕಾಗಿತ್ತು. ಇದನ್ನು ತಪ್ಪಿಸಿಕೊಳ್ಳಲು ಗ್ರೇಸ್ ಅಂಕದ ಮ್ಯಾಜಿಕ್ ನಡೆಸಲಾಗಿದೆ.

ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್ ವಿಧಾನವನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫಲಿತಾಂಶವನ್ನು ಉತ್ತಮ ಪಡಿಸಲು ಗ್ರೇಸ್‌ ಮಾರ್ಕ್ಸ್‌ ನಿರ್ಧಾರವನ್ನು ಕೈಗೊಂಡಿದ್ದಾಗಿ ಶಿಕ್ಷಣ ಇಲಾಖೆ ಹೇಳಿದೆ.

ಅಂದರೆ, ನಕಲು ಮಾಡಲು ಸಾಧ್ಯವಾಗದ ಕಾರಣ ಹೆಚ್ಚಿನ ಕಡೆ ಫಲಿತಾಂಶ ಕುಸಿದಿದೆ ಎಂಬುದನ್ನು ಶಿಕ್ಷಣ ಇಲಾಖೆ ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ.

ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ಫಲಿತಾಂಶ ಪ್ರಕಟಿಸಿದರು. ಈ ಬಾರಿ ಪರೀಕ್ಷೆ ಬರೆದಿದ್ದ 8.59 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇ.73.40ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷದ ಶೇ.83.89ರಷ್ಟು ಫಲಿತಾಂಶಕ್ಕೆ ಹೋಲಿಸಿದರೆ ಶೇ.10.49ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.

ಈವರೆಗೆ ಗರಿಷ್ಠ ಮೂರು ವಿಷಯಗಳಲ್ಲಿ ಕೆಲವೇ ಅಂಕಗಳಿಂದ ಫೇಲಾಗುವ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲು ಅಳವಡಿಸಲಾಗಿದ್ದ ಶೇ.10ರಷ್ಟು ಗ್ರೇಸ್ ಅಂಕದ ಪ್ರಮಾಣವನ್ನು ಸರ್ಕಾರದ ಅನುಮತಿಯೊಂದಿಗೆ ಈ ಬಾರಿ ಶೇ.20ರಷ್ಟು ಹೆಚ್ಚಳ ಮಾಡಿದ್ದೇವೆ. ಅಲ್ಲದೆ, ಗ್ರೇಸ್ ಅಂಕ ಪಡೆಯಲು ಒಟ್ಟಾರೆ 6 ವಿಷಯಗಳ ಲಿಖಿತ ಪರೀಕ್ಷೆಯಲ್ಲಿ ಶೇ.35ರಷ್ಟು (ಆರು ವಿಷಯಗಳಿಂದ 175) ಅಂಕ ಗಳಿಸಬೇಕೆಂಬ ಮಾನದಂಡವನ್ನು ಈ ಬಾರಿ ಶೇ.25ಕ್ಕೆ (125 ಅಂಕ) ಇಳಿಸಲಾಗಿದೆ. ಇದರಿಂದ ಮೂರು ವಿಷಯಗಳಲ್ಲಿ ಪಾಸಾಗಿದ್ದು, ಇನ್ನು ಮೂರು ವಿಷಯಗಳಲ್ಲಿ ಫೇಲಾಗಿದ್ದರೂ ಒಟ್ಟಾರೆ ಆರೂ ವಿಷಯಗಳಿಂದ 125 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಶೇ.20ರಷ್ಟು ಗ್ರೇಸ್ ಅಂಕ ನೀಡಿ ಪಾಸ್ ಮಾಡಲಾಗಿದೆ. ಆ ರೀತಿಯಲ್ಲಿ 1.23 ವಿದ್ಯಾರ್ಥಿಗಳು ಪಾಸಾಗಿದ್ದಾರೆಂದು ವಿವರಿಸಿದರು.

ಈ ಗ್ರೇಸ್ ಅಂಕವನ್ನು ದುಪ್ಪಟ್ಟುಗೊಳಿಸದೇ ಹೋಗಿದ್ದರೆ ಫಲಿತಾಂಶ ಶೇ.53ಕ್ಕೆ ಕುಸಿಯುತ್ತಿತ್ತು. ಅಂದರೆ ಕಳೆದ ವರ್ಷಕ್ಕಿಂತ ಶೇ.30ರಷ್ಟು ಫಲಿತಾಂಶ ಇಳಿಕೆಯಾಗುತ್ತಿತ್ತು ಎಂದರು.

ಫಲಿತಾಂಶದಲ್ಲಿ ಶೇ.20ರಷ್ಟು ಗ್ರೇಸ್ ನೀಡಿರುವುದು ಈ ಬಾರಿಗಷ್ಟೇ ಸೀಮಿತ. ಮುಂದಿನ ಸಾಲಿನಿಂದ ಈ ಹಿಂದೆ ಇದ್ದಂತೆ ಶೇ.10ರಷ್ಟು ಗ್ರೇಸ್ ಅಂಕ ಮಾತ್ರ ನೀಡಲಾಗುವುದು ಎಂದು ಇದೇ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪರೀಕ್ಷಾ ವ್ಯವಸ್ಥೆ ಸುಧಾರಣೆಗಾಗಿ ಈ ಬಾರಿ ಪ್ರತಿಯೊಂದು ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಮತ್ತು ವೆಬ್ ಕಾಸ್ಟಿಂಗ್ ನಡೆಸಿದ್ದರಿಂದ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ. ಇದರಿಂದ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿತವಾಗುವುದು ಕಂಡು ಬಂದಿದ್ದರಿಂದ ಗ್ರೇಸ್ ಅಂಕಗಳ ಪ್ರಮಾಣನ್ನು ಶೇ.10 ರಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ. ಇದು ಈ ಸಾಲಿಗೆ ಮಾತ್ರ ಸೀಮಿತ. ಆದರೆ, ಸಿಸಿಟಿವಿ ಕ್ಯಾಮೆರಾ ಮತ್ತು ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಕೈಬಿಡುವುದಿಲ್ಲ ಎಂದರು.

ಈ ನಡುವೆ ಶಿಕ್ಷಣ ತಜ್ಞರು, ಪ್ರಾಂಶುಪಾಲರು ಮತ್ತು ಖಾಸಗಿ ಶಾಲಾ ಸಂಘಗಳು ಇಲಾಖೆಯ ಕ್ರಮವನ್ನು ಪ್ರಶ್ನಿಸಿವೆ.

ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇಲಾಖೆ ವಿಫಲವಾಗಿದೆ. ಕಳಪೆ ಗುಣಮಟ್ಟದ ಶಿಕ್ಷಣವನ್ನು ಪ್ರೋತ್ಸಾಹಿಸಬಾರದು ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಕಾರ್ಯದರ್ಶಿ ಶಶಿಕುಮಾರ್ ಡಿ ಅವರು ಹೇಳಿದ್ದಾರೆ.

ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಗಳ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ ಬಿ.ಎನ್ ಮಾತನಾಡಿ, ವಿದ್ಯಾರ್ಥಿಗಳು ಇನ್ನೂ ಎರಡು ಬಾರಿ ಪ್ರಯತ್ನ ನಡೆಸಲು ಅವಕಾಶ ಇರುವಾಗ, ಮೊದಲ ಪರೀಕ್ಷೆಯಲ್ಲಿ ಹೆಚ್ಚಿನ ಗ್ರೇಸ್ ಅಂಕಗಳನ್ನು ಏಕೆ ನೀಡಲಾಯಿತು? 10ನೇ ತರಗತಿಯಲ್ಲಿ ಅಂಕ ಗಳಿಸಲು ಸಾಧ್ಯವಾಗದಿದ್ದರೆ ಪಿಯುಸಿಯಲ್ಲಿ ಮಕ್ಕಳು ಹೇಗೆ ಹೊಂದಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಶಾಲೆಗಳಲ್ಲಿ ಶೇ. 68.78ರಷ್ಟು ಫಲಿತಾಂಶ

ಬಿಬಿಎಂಪಿ ನಿರ್ವಹಣೆಯ 33 ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 2,502 ವಿದ್ಯಾರ್ಥಿಗಳ ಪೈಕಿ 1,721 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇಕಡ 68.78ರಷ್ಟು ಫಲಿತಾಂಶ ಪಡೆದುಕೊಂಡಿವೆ.

ಕಳೆದ 2022-23ನೇ ಸಾಲಿನಲ್ಲಿ ಬಿಬಿಎಂಪಿ ಪ್ರೌಢಶಾಲೆಗಳು ಶೇ. 67.53ರಷ್ಟು ಫಲಿತಾಂಶ ಪಡೆದುಕೊಂಡಿದ್ದವು. ಈ ವರ್ಷ ಶೇ. 1.25ರಷ್ಟು ಹೆಚ್ಚಿನ ಫಲಿತಾಂಶ ಬಂದಿದೆ.

ಮತ್ತಿಕೆರೆಯ ಬಾಲಕಿಯರ ಪ್ರೌಢಶಾಲೆಯು ಶೇ. 92.78ರಷ್ಟು ಫಲಿತಾಂಶ ಪಡೆದು ಅಗ್ರಸ್ಥಾನ ಪಡೆದುಕೊಂಡಿದೆ. ಉಳಿದಂತೆ ಭೈರವೇಶ್ವರನಗರ ಪ್ರೌಢಶಾಲೆಯು ಶೇ.91.98, ಹೇರೋಹಳ್ಳಿ ಪ್ರೌಢಶಾಲೆಯು ಶೇ.90.56ರಷ್ಟು ಫಲಿತಾಂಶ ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. 2023-24ನೇ ಸಾಲಿನಲ್ಲಿ ಒಟ್ಟು 66 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶ್ರೀರಾಂಪುರ ಬಾಲಕಿಯರ ಪ್ರೌಢಶಾಲೆಯ ಪಿ. ಚಂದನ 625ಕ್ಕೆ 619 ಅಂಕಗಳಿಸಿ, ಬಿಬಿಎಂಪಿ ಪ್ರೌಢಶಾಲೆಯಲ್ಲಿಯೇ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾರೆ. ಲಗ್ಗೆರೆ ಪ್ರೌಢಶಾಲೆಯ ಟಿ.ಜೆ.ಯಶವಂತ್‌ 610 ಅಂಕ ಪಡೆದಿದ್ದಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT