ನಕ್ಸಲ್ ನಾಯಕ ವಿಕ್ರಮ್ ಗೌಡ  
ರಾಜ್ಯ

ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆಯ ತನಿಖೆಗೆ ಸರ್ಕಾರ ನಕಾರ

ಎಎನ್‌ಎಫ್ ಗುಂಡು ಹಾರಿಸದಿದ್ದರೆ, ಆತ ಭದ್ರತಾ ಪಡೆ ಮೇಲೆ ಗುಂಡು ಹಾರಿಸುತ್ತಿದ್ದನು. ಹೀಗಾಗಿ ವಿಕ್ರಮ್ ಗೌಡನನ್ನು ಎನ್ ಕೌಂಟರ್ ಮಾಡಲಾಗಿದೆ.

ಬೆಂಗಳೂರು: ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆಯಾಗಿದ್ದು, ಆತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ.

ಎಎನ್‌ಎಫ್ ಗುಂಡು ಹಾರಿಸದಿದ್ದರೆ, ಆತ ಭದ್ರತಾ ಪಡೆ ಮೇಲೆ ಗುಂಡು ಹಾರಿಸುತ್ತಿದ್ದನು. ಹೀಗಾಗಿ ವಿಕ್ರಮ್ ಗೌಡನನ್ನು ಎನ್ ಕೌಂಟರ್ ಮಾಡಲಾಗಿದೆ ಎಂದ ಗೃಹ ಸಚಿವರು, ನಕ್ಸಲ್ ನಾಯಕನ ಹತ್ಯೆಗೆ ಸಂಬಂಧಿಸಿದ ಯಾವುದೇ ಅನುಮಾನಗಳನ್ನು ತಳ್ಳಹಾಕಿದರು ಮತ್ತು ತನಿಖೆ ಮಾಡಬೇಕು ಎಂಬ ಮನವಿಯನ್ನು ತಿರಸ್ಕರಿಸಿದರು.

"ವಿಕ್ರಮ್ ಗೌಡ ಮಾರಣಾಂತಿಕ ಆಯುಧವನ್ನು ಹೊಂದಿದ್ದನು. ಸ್ವಯಂಚಾಲಿತ ಮೆಷಿನ್ ಗನ್ ತರಹದ ಆಯುಧ ಹೊಂದಿದ್ದನು. ಎಎನ್‌ಎಫ್ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸದಿದ್ದರೆ, ವಿಕ್ರಮ್ ಗೌಡ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸುತ್ತಿದ್ದನು. ಆದ್ದರಿಂದ ಮೊದಲು ಆತನ ಮೇಲೆ ಗುಂಡು ಹಾರಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಹೀಗಾಗಿ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ ಎಂದು ಪರಮೇಶ್ವರ ಹೇಳಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ವಿಕ್ರಮ್ ಗೌಡ ವಿರುದ್ಧ ಕೊಲೆ ಆರೋಪ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣಗಳಿವೆ. "... ಆದ್ದರಿಂದ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳದೆ 'ಎನ್ಕೌಂಟರ್' ಮಾಡಿದ್ದಾರೆ. ಇಲಾಖೆಯಿಂದ ಲಿಖಿತವಾಗಿ ನನಗೆ ಮಾಹಿತಿ ಬಂದ ನಂತರ ನಾನು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಬಹುದು" ಎಂದು ಹೇಳಿದರು.

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕಬ್ಬಿನಾಲೆ ಪ್ರದೇಶದ ಪೇಟೆಬೈಲು ಗ್ರಾಮದ ಬಳಿ ಎಎನ್‌ಎಫ್ ಹಾಗೂ ಮಾವೋವಾದಿಗಳ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಮ್ ಗೌಡ(46)ನನ್ನ ಹತ್ಯೆ ಮಾಡಲಾಗಿದೆ.

ಅಧಿಕಾರಿಗಳ ಪ್ರಕಾರ, ವಿಕ್ರಮ್ ಗೌಡ ಕರ್ನಾಟಕದ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕರಲ್ಲಿ ಒಬ್ಬರಾಗಿದ್ದರು. ಕರ್ನಾಟಕದಲ್ಲಿ ಕೊಲೆ ಮತ್ತು ಸುಲಿಗೆ ಸೇರಿದಂತೆ 61 ಮತ್ತು ಕೇರಳದಲ್ಲಿ 19 ಪ್ರಕರಣಗಳನ್ನು ಎದುರಿಸುತ್ತಿದ್ದರು.

ಕಳೆದ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಕ್ಸಲ್ ಚಟುವಟಿಕೆಗಳು ಹೆಚ್ಚಿವೆ ಎಂಬ ಕಾರ್ಕಳದ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಎಎನ್‌ಎಫ್ ಪ್ರಧಾನ ಕಚೇರಿ ಇರುವ ತಮ್ಮ ಕ್ಷೇತ್ರವಾದ ಕಾರ್ಕಳದಲ್ಲಿ ಘಟನೆ ನಡೆದಿರುವುದನ್ನು ಗಮನಿಸಬೇಕು ಎಂದರು.

"ಎಎನ್‌ಎಫ್ ನಿರಂತರವಾಗಿ ನಕ್ಸಲ್ ಚಟುವಟಿಕೆಗಳ ಮೇಲೆ ನಿಗಾ ಇರಿಸಿತ್ತು. ಇತ್ತೀಚಿನವರೆಗೂ ಏನೂ ಇರಲಿಲ್ಲ. ಹದಿನೈದು ದಿನಗಳ ಹಿಂದೆ ನಕ್ಸಲ್ ನಾಯಕರಾದ ಲತಾ ಮತ್ತು ರಾಜು ಎಂಬ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡರು ಮತ್ತು ಈ ಬಗ್ಗೆ ನನಗೆ ವರದಿ ಮಾಡಲಾಗಿತ್ತು. ಆದ್ದರಿಂದ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ವಿಕ್ರಮ್ ಗೌಡ ಬಗ್ಗೆ ಮಾಹಿತಿ ಬಂದ ನಂತರ ಎಎನ್‌ಎಫ್ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿತ್ತು, ಅಷ್ಟರಲ್ಲೇ 'ಎನ್‌ಕೌಂಟರ್' ನಡೆದಿದೆ" ಎಂದು ಅವರು ಹೇಳಿದರು.

ವಿಕ್ರಮ್ ಗೌಡ ಹತ್ಯೆಯ ಬಗ್ಗೆ ತನಿಖೆಯಾಗಬೇಕು ಎಂದು ಕೆಲವರು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರ ವಿರುದ್ಧ 60 ಪ್ರಕರಣಗಳಿವೆ ಮತ್ತು ಅವರು "ಎನ್‌ಕೌಂಟರ್" ಮಾಡಿದಾಗ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. "ಯಾವ ಕೋನದಲ್ಲಿ ತನಿಖೆ ನಡೆಸಬೇಕು ಹೇಳಿ.. ಎಲ್ಲವನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡಲಾಗಿದೆ. ಸ್ವಯಂಚಾಲಿತ ಮೆಷಿನ್ ಗನ್‌ನಂತಹ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಕೊಲೆ ಮಾಡುವ ವ್ಯಕ್ತಿಯನ್ನು ಜೀವಂತವಾಗಿ ಬಿಟ್ಟು ಸೌಹಾರ್ದಯುತವಾಗಿ ನಡೆಸಿಕೊಳ್ಳಲಾಗುವುದಿಲ್ಲ" ಎಂದರು.

ಎನ್‌ಕೌಂಟರ್‌ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ "ವ್ಯತ್ಯಾಸ" ಇಲ್ಲ ಎಂದು ಕೆಲವು "ಎಡಪಂಥೀಯರು" ಸರ್ಕಾರವನ್ನು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಇದು ಎರಡು ರಾಜಕೀಯ ಪಕ್ಷಗಳ ಪ್ರಶ್ನೆಯಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT