ಬೆಂಗಳೂರು: ನಗರಗಳ ನಡುವಿನ ಸಂಪರ್ಕವನ್ನು ಅಭಿವೃದ್ಧಿಪಡಿಸಲು ರೂಪಿಸಲಾಗಿರುವ ನಮೋ ಭಾರತ್ ರ್ಯಾಪಿಡೋ ರೈಲು ಸಂಚಾರ ಶೀಘ್ರದಲ್ಲೇ ಕರ್ನಾಟಕದಲ್ಲೂ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಹೇಳಿದರು.
ನಗರಕ್ಕೆ ಶನಿವಾರ ಭೇಟಿ ನೀಡಿದ ಅಶ್ವಿನಿ ವೈಷ್ಣವ್ ಅವರು, ದೇವನಹಳ್ಳಿ ರೈಲ್ವೆ ನಿಲ್ದಾಣದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದವರೆಗೆ ನಡೆಸಲಾಗುತ್ತಿರುವ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.
ಈ ವೇಳೆ ಕೇಂದ್ರ ಸಚಿವರಿಗೆ, ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ಸಂಸದ ಪಿಸಿ ಮೋಹನ್ ಮತ್ತು ರೈಲ್ವೆ ಅಧಿಕಾರಿಗಳು ಸಾಥ್ ನೀಡಿದ್ದರು.
ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವಿನಿ ವೈಷ್ಣವ್ ಅವರು, ನಗರಗಳ ನಡುವಿನ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಈ ಯೋಜನೆ ರೂಪಿಸಲಾಗಿದೆ. ಇದು ಒಂದು ನಗರದಿಂದ ಇನ್ನೊಂದು ನಗರಕ್ಕೆ ಅತ್ಯಂತ ವೇಗವಾಗಿ ಸಂಪರ್ಕ ಕಲ್ಪಿಸಲಿದೆ. 150ರಿಂದ200 ಕಿ.ಮೀ. ವ್ಯಾಪ್ತಿಯೊಳಗೆ ಈ ರೈಲುಗಳು ಸಂಚರಿಸಲಿವೆ. ಉದ್ಯೋಗ ಹಾಗೂ ಇತರೆ ಕೆಲಸಗಳಿಗಾಗಿ ತುಮಕೂರು, ಮೈಸೂರಿನಿಂದ ಬೆಂಗಳೂರಿಗೆ ಬರುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇತ್ತೀಚೆಗೆ ದೇಶದ ಮೊದಲ ರ್ಯಾಪಿಡೋ ರೈಲು (ವಂದೇ ಮೆಟ್ರೋ) ಗುಜರಾತ್'ನ ಅಹ್ಮದಾಬಾದ್-ಭುಜ್ ನಡುವೆ ಆರಂಭವಾಗಿತ್ತು. ಅಂತರ್ ನಗರಗಳ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ ಈ ರೈಲಿನ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ ಈ ರೈಲನ್ನು ಬೆಂಗಳೂರಿನಿಂದ ತುಮಕೂರು, ಮೈಸೂರಿಗೆ ಆರಂಭ ಮಾಡಲಾಗುವುದು ಎಂದು ತಿಳಿಸಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ರೈಲ್ವೇ ನಿಲ್ದಾಣವನ್ನು ನಿರ್ಮಿಸುವ ಸಂಬಂಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುವುದು. ನಗರ ಹಾಗೂ ವಿಮಾನ ನಿಲ್ದಾಣ ನಡುವೆ ಹೋಗಿ ಬರುವವರಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ಕಂಟೋನ್ಮೆಂಟ್ ಪುನರಾಭಿವೃದ್ಧಿ ಕುರಿತು ಮಾತನಾಡಿ, ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿ ರೂ.480 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ವಿಶ್ವ ದರ್ಜೆಯ ವ್ಯವಸ್ಥೆ ಇಲ್ಲಿರಲಿದೆ. 28.023 ಚದರ ಅಡಿಯಲ್ಲಿ ನಿಲ್ದಾಣ ತಲೆ ಎತ್ತಲಿದೆ. ನೆಲಮಹಡಿಯಲ್ಲಿ ಏಕಕಾಲಕ್ಕೆ 250 ದ್ವಿಚಕ್ರ ಹಾಗೂ 250 ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ವಂದೇ ಭಾರತ್'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ರೈಲುಗಳು ಶೇ.100 ಪ್ರಯಾಣಿಕರಿಂದ ತುಬಿವೆ. ಚೆನ್ನೈ ರೈಲು ಶೇ.120, ಕಾಚಿಗುಡ ಶೇ.106, ಕೊಯಮತ್ತೂರು ಶೇ.90, ಹುಬ್ಬಳ್ಳಿ-ಪುಣೆ ರೈಲು ಶೇ.65 ಹಾಗೂ ಬೆಂಗಳೂರು ಧಾರವಾಡ ವಂದೇ ಭಾರತ್ ರೈಲು ಶೇ.86ರಷ್ಟು ಪ್ರಯಾಣಿಕರಿಂದ ಭರ್ತಿಯಾಗುತ್ತಿದೆ ಎಂದು ಸಚಿವರು ತಿಳಿಸಿದರು.