ಬೆಂಗಳೂರು: ರಾಜರಾಜೇಶ್ವರಿನಗರ ವಲಯದ ಕೆಂಚೇನಹಲ್ಲಿಯ ಐಡಿಯಲ್ ಹೋಮ್ಸ್ ಪೆಟ್ರೋಲ್ ಬ್ಯಾಂಕ್ ಬಳಿ ಖಾಸಗಿ ಕಟ್ಟಡ ನಿರ್ಮಾಣದ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದ ಹಿನ್ನೆಲೆಯಲ್ಲಿ ಭೂ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಟ್ಟಡ ಮಾಲೀಕರ ಮೇಲೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಂಜೇಗೌಡ ಎಂಬುವವರು ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆಯದೆ ಸುಮಾರು 6-8 ಅಡಿ ಆಳ ತಳಪಾಯದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದರು. ಈ ವೇಳೆ ಸುಮಾರು 70 ಅಡಿ ಉದ್ದದಷ್ಟು ಪಾದಚಾರಿ ರಸ್ತೆ ಹಾಗೂ ಒಳಚರಂಡಿಯು ಕುಸಿದು ಬಿದ್ದು, ನಾಗರಿಕರು ಓಡಾಡಲು ಸಮಸ್ಯೆಯಾಗಿದೆ. ಜೊತೆಗೆ ಅಲ್ಲಿರುವ ಬಿಎಂಟಿಸಿ ಬಸ್ ತಂಗುದಾಣವೂ ಕೂಡ ಕುಸಿಯುವ ಸಂಭವ ಇದೆ ಎನ್ನಲಾಗಿದ್ದು, ಇದರಿಂದ ಪಾಲಿಕೆಗೆ ಅಂದಾಜು 20 ಲಕ್ಷ ರೂ.ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯು BBMP ಕಾಯಿದೆ 2020 ರ 313 ಸೆಕ್ಷನ್ ಅಡಿಯಲ್ಲಿ ಭೂ ಮಾಲೀಕನಿಗೆ ನೋಟಿಸ್ ಜಾರಿ ಯೋಜನೆಯ ಅನುಮೋದನೆ ಸೇರಿ ಮುಂತಾದ ವಿವರಗಳನ್ನು ಕೇಳಲಾಗಿತ್ತು. ಆದರೆ, ಮಾಲೀಕನಿಂಗ ಯಾವದೇ ಪ್ರತಿಕ್ರಿಯೆ ಬರಲಿಲ್ಲ. ಅಲ್ಲದೆ, ಅನಧಿಕೃತವಾಗಿ ಭೂಮಿ ಅಗೆದ ಪರಿಣಾಮ ಚರಂಡಿಯ ಒಂದು ಭಾಗ ಕುಸಿದುಬಿದ್ದು, ನಾಗರೀಕರ ಓಡಾಟಕ್ಕೆ ಸಮಸ್ಯೆಯಾಗಿದೆ. ಇದರಿಂದ ಪಾಲಿಕೆಗೆ ರೂ.20 ಲಕ್ಷ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಭೂಮಾಲೀಕನ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಸೈಟ್ನಲ್ಲಿ ನೋಟಿಸ್ ಹಾಕಲಾಗಿತ್ತು. ನಂತರ ಮಂಜೇಗೌಡ ಎಂಬುವವರು ಮಾಲೀಕರಾಗಿದ್ದಾರೆಂದು ತಿಳಿದುಬಂದಿತ್ತು. ಇವರು ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯದೇ ಸುಮಾರು 6-8 ಅಡಿ ಭೂಮಿ ಅಗೆದಿರುವುದು ಕಂಡು ಬಂದಿದ್ದು, ಕಟ್ಟಡ ಕಾಮಗಾರಿ ವೇಳೆ ಮುಂಜಾಗೃತ ಕ್ರಮ ಅನುಸರಿಸದೆ ಕಾಮಗಾರಿ ಮಾಡುತ್ತಿರುವುದರಿಂದ ಅಕ್ಕ-ಪಕ್ಕದ ಮನೆಗಳಿಗೂ ಸಹ ಹಾನಿಯಾಗುವ ಸಾಧ್ಯತೆ ಕಂಡು ಬಂದಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಆರ್‌ಆರ್‌ನಗರ ಉಪವಿಭಾಗ) ವರನಾರಾಯಣ ಕೆ ಅವರು ಹೇಳಿದ್ದಾರೆ.