ಸಂಗ್ರಹ ಚಿತ್ರ 
ರಾಜ್ಯ

ಕಾಫಿ ಪ್ರಿಯರಿಗೆ ಬಿಗ್ ಶಾಕ್: ಪ್ರತಿ ಕೆಜಿ ಕಾಫಿ ಪುಡಿ ಬೆಲೆ 100 ರೂ ಏರಿಕೆ..!

ಇಂಡಿಯನ್‌ ಕಾಫಿ ಟ್ರೇಡ್‌ ಅಸೋಸಿಯೇಶನ್‌ ​​(ಐಸಿಟಿಎ) ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ.

ಬೆಂಗಳೂರು: ಹಾಲಿನ ಬೆಲೆ ಏರಿಕೆ ಜೊತೆಗೆ ಕಾಫಿ ಪುಡಿ ಬೆಲೆಯೂ ಹೆಚ್ಚಾಗುತ್ತಿದ್ದು, ಕಾಫಿ ಪ್ರಿಯರಿಗೆ ಕಹಿ ಅನುಭವವಾಗತೊಡಗಿದೆ. ಅ. 15ರಿಂದ ಪ್ರತೀ ಕೆಜಿ ಕಾಫಿ ಪುಡಿ ಮೇಲೆ 100 ರೂ. ದುಬಾರಿಯಾಗಲಿದೆ.

ಇಂಡಿಯನ್‌ ಕಾಫಿ ಟ್ರೇಡ್‌ ಅಸೋಸಿಯೇಶನ್‌ ​​(ಐಸಿಟಿಎ) ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ.

ಕಾಫಿ ಪುಡಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಗಳು ಹಾಗೂ ಕೆಫೆಗಳಲ್ಲಿಯೂ ಬೆಲೆ ಏರಿಕೆಯಾಗುವುದು ಸಾಮಾನ್ಯವಾಗಿದೆ.

ಹವಾಮಾನ ವೈಪರೀತ್ಯದಿಂದಾದಿ ಬೆಳೆ ಇಳಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಮಾಡುವುದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಈಗಾಗಲೇ ಅರೇಬಿಕಾ ಮತ್ತು ರೋಬಸ್ಟಾ ಕಾಫಿಯ ಬೆಲೆಯಲ್ಲಿ ಏರಿಕೆಯಾಗಿದೆ. ಜಾಗತಿಕವಾಗಿ ಕಾಫಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ, ವಿವಿಧ ಅಂಶಗಳಿಂದ ಅದರ ಉತ್ಪಾದನೆಯು ಕಡಿಮೆಯಾಗಿದೆ. ಭಾರತೀಯ ಕಾಫಿಗೆ ಹೆಚ್ಚಿನ ಬೇಡಿಕೆಯಿದ್ದು, ಬೇಡಿಕೆಯನ್ನು ಪೂರೈಸಬೇಕಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕಾಫಿ ಬೀಜದ ಬೆಲೆ ಕೆಜಿಗೆ 200- 280 ರಿಂದ ಹೆಚ್ಚಾಗಿದೆ ಎಂದು ಐಸಿಟಿಎ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಅವರು ಹೇಳಿದ್ದಾರೆ.

ಐಸಿಟಿಎ ಪ್ರಕಾರ, ಭಾರತವು 3.5 ಲಕ್ಷ ಟನ್‌ಗಳಷ್ಟು ಕಾಫಿಯನ್ನು ಉತ್ಪಾದಿಸುತ್ತದೆ, ಈ ಪೈಕಿ ಶೇ.70ರಷ್ಟು ಬೆಳೆಯು ರೊಬಸ್ಟಾ ತಳಿಯಾಗಿದೆ. ಒಟ್ಟು ಉತ್ಪಾದನೆಯಲ್ಲಿ ಸುಮಾರು ಒಂದು ಲಕ್ಷ ಟನ್ ದೇಶೀಯವಾಗಿ ಬಳಕೆಯಾಗುತ್ತದೆ. ಜನವರಿಯಿಂದ ಕಾಫಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ರೊಬಸ್ಟಾ ಕಾಫಿ ಬೆಲೆ ಕೆಜಿಗೆ 200 ರೂ.ನಿಂದ 420 ರೂ.ಗೆ ಮತ್ತು ಅರೇಬಿಕಾ ಕೆಜಿಗೆ 290 ರೂ.ನಿಂದ 465 ರೂ.ಗೆ ಏರಿಕೆಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಕಾಫಿ ಉತ್ಪಾದನೆಯಲ್ಲಿ ಶೇ.20ರಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆಗಳು ಹೆಚ್ಚಾದಾಗ ದೇಶೀಯ ಮಾರುಕಟ್ಟೆಯಲ್ಲಿಯೂ ಬೆಲೆಗಳು ಹೆಚ್ಚಾಗುತ್ತವೆ. ಕಳೆದ ಮೂರು ವರ್ಷಗಳಲ್ಲಿ ಹಸಿರು ಕಾಫಿ ಉತ್ಪಾದನೆಯಲ್ಲಿ ಶೇ.40-50 ಹೆಚ್ಚಳವಾಗಿದೆ. ಉತ್ಪಾದನೆ ಹೆಚ್ಚಾದಾಗ ಕಾಫಿ ಬೆಲೆಯಲ್ಲಿ ತಿದ್ದುಪಡಿ ಆಗುತ್ತದೆ. ಆದಾಗ್ಯೂ, ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ ಕಲಬೆರಕೆ ಸಾಧ್ಯತೆಗಳಿರುವುದರಿಂದ ಚಿಕೋರಿ ಮಿಶ್ರಣದ ಮೇಲೆ ನಿಗಾ ಇಡಬೇಕು ಎಂದು ಕಾಫಿ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಕಾರ, ಕಾಫಿಯೊಂದಿಗೆ ಚಿಕೋರಿ ಮಿಶ್ರಣವನ್ನು ಶೇ.49ರಷ್ಟು ಮಿಶ್ರಣ ಮಾಡಬಹುದು. ಆದಾಗ್ಯೂ, ವ್ಯಾಪಾರಿಗಳು ಕಾಫಿಯ ಸುವಾಸನೆ ಮತ್ತು ವಿನ್ಯಾಸವನ್ನು ಕಡಿಮೆ ಮಾಡುವುದರಿಂದ ಶೇ,20 ಕ್ಕಿಂತ ಹೆಚ್ಚು ಚಿಕೋರಿಯನ್ನು ಮಿಶ್ರಣ ಮಾಡುವುದಿಲ್ಲ. ಆದರೆ, ಇದೀಗ ಕಾಫಿ ಬೆಲೆ ಏರಿಕೆಯಿಂದ ಚಿಕೋರಿ ಮಿಶ್ರಣವೂ ಹೆಚ್ಚಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ನಿಗಾ ವಹಿಸುವುದು ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ 300 ನೋಂದಾಯಿತ ಕಾಫಿ ರೋಸ್ಟರ್‌ಗಳು ಮತ್ತು ದಕ್ಷಿಣ ಭಾರತದಲ್ಲಿ ಸುಮಾರು 500 ಕಾಫಿ ರೋಸ್ಟರ್‌ಗಳಿದ್ದಾರೆ. ಅಲ್ಲದೆ, 3,000 ನೋಂದಾಯಿತ ಕಾಫಿ ವ್ಯಾಪಾರ ಘಟಕಗಳಿವೆ.

ಕಾಫಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೋಂದಣಿಯಾಗದ ಘಟಕಗಳು ಹಾಗೂ ಗುಣಮಟ್ಟವಿಲ್ಲದ ಕಾಫಿ ಮಾರಾಟ ಮಾಡುವವರಿಗೆ ಐಸಿಟಿಎ ಕಠಿಣ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT