ಬೆಂಗಳೂರು: ಸುಮಾರು 50 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕೊಂದು ನಂತರ ಶವದೊಂದಿಗೆ ಸಂಭೋಗ ನಡೆಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕೋಲಾರ ಪೊಲೀಸರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಮುಳಬಾಗಲು ಪಟ್ಟಣದ ಹೈದರ್ ನಗರದ ನಿವಾಸಿ, ಸೈಯದ್ ಸುಹೇಲ್ ಎಂದು ಗುರುತಿಸಲಾಗಿದೆ. ಆರೋಪಿ ಸೈಯದ್ ಸುಹೇಲ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಸೆಪ್ಟೆಂಬರ್ 24ರಂದು ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆಯನ್ನು ಪಳ್ಳಿಗರಪಾಳ್ಯದ ಸುಶೀಲಮ್ಮ ಎಂದು ಗುರುತಿಸಲಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದರು. ಇದೀಗ ಆರೋಪಿಯ ಬಂಧನವಾಗಿದ್ದು. ತನಿಖೆ ನಡೆಯುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ಥೆ ಸುಶೀಲಮ್ಮಮಾನಸಿಕ ಅಸ್ವಸ್ಥಳಾಗಿದ್ದರೂ ಸುತ್ತಮುತ್ತಲ ಪ್ರದೇಶದಲ್ಲಿ ತಿರುಗಾಡುತ್ತಿದ್ದಳು. ಅದೇ ರೀತಿ ಘಟನೆ ನಡೆದ ದಿನದಂದು ರಾತ್ರಿ 7.30 ಕ್ಕೆ ತನ್ನ ನಿವಾಸದಿಂದ ಹೊರಟು ಮಾರುಕಟ್ಟೆ ಮತ್ತು ಇತರ ಪ್ರದೇಶಗಳಲ್ಲಿ ತಿರುಗಾಡಿದ್ದಳು.
ರಾತ್ರಿ 1 ಗಂಟೆ ಸುಮಾರಿಗೆ ಆಕೆ ಮನೆಗೆ ಹಿಂತಿರುಗುತ್ತಿದ್ದಾಗ ಆರೋಪಿ ಆಟೋ ಚಾಲಕ ಆಕೆಯನ್ನು ಗಮನಿಸಿ ನಿವಾಸಕ್ಕೆ ಕರೆದೊಯ್ಯುವುದಾಗಿ ಹೇಳಿ ಆಟೋ ಹತ್ತಿಸಿಕೊಂಡಿದ್ದಾನೆ. ಬಳಿಕ ಮಹಿಳೆಯನ್ನು ಆಕೆಯ ನಿವಾಸಕ್ಕೆ ಕರೆದುಕೊಂಡು ಹೋಗುವ ಬದಲು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರತ್ಯೇಕ ಸ್ಥಳದ ಕಡೆಗೆ ಕರೆದುಕೊಂಡು ಹೋಗಿದ್ದಾನೆ.
ಈ ವೇಳೆ ಅನುಮಾನಗೊಂಡ ಸುಶೀಲಮ್ಮ ಆಟೋ ತಿರುವು ತೆಗೆದುಕೊಳ್ಳುವಾಗ ವಾಹನದಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದಾಳೆ. ಆಕೆ ಕೆಳಗೆ ಜಿಗಿದು ಆರೋಪಿ ಸೊಹೇಲ್ ನನ್ನು ಬೈದಿದ್ದು, ಇದರಿಂದ ಆಕ್ರೋಶಗೊಂಡ ಸೊಹೇಲ್ ಆಕೆಯ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ಈ ವೇಳೆ ಆಕೆ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಸಾವನ್ನಪ್ಪಿದ್ದರೂ ಬಿಡದ ಕಾಮುಕ ಸುಹೇಲ್
ಇನ್ನು ಈ ವೇಳೆ ಆಕೆಯನ್ನು ಪರೀಕ್ಷಿಸಿದ ಚಾಲಕ ಸುಹೇಲ್ ಆಕೆ ಪ್ರಜ್ಞೆ ತಪ್ಪಿದ್ದಾಳೆ ಎಂದು ಭಾವಿಸಿ ಸುತ್ತಮುತ್ತ ಯಾರೂ ಇಲ್ಲದ್ದನ್ನು ಮನಗಂಡು ಆಕೆಯ ಶವದ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಆಕೆ ಎಚ್ಚರವಾಗದೇ ಇದ್ದಾಗ ಆಕೆ ಸಾವನ್ನಪ್ಪಿದ್ದಾಳೆ ಎಂದು ಖಚಿತಪಡಿಸಿಕೊಂಡು ಆಕೆಯ ಶವವನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ಬಳಿಕ ಆರೋಪಿ ಸೊಹೇಲ್ ಪಕ್ಕದ ಊರಾದ ಚಿಂತಾಮಣಿಯಲ್ಲಿ ತಲೆಮರೆಸಿಕೊಂಡಿದ್ದ.
ಈ ನಡುವೆ ಮಧ್ಯರಾತ್ರಿಯಾದರೂ ಸುಶೀಲಮ್ಮ ಮನೆಗೆ ಬಂದಿಲ್ಲ ಎಂದು ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ಹುಡುಕಾಟದ ನಂತರ ಮೃತದೇಹ ಪತ್ತೆಯಾಗಿದೆ. ತನಿಖೆ ವೇಳೆ ಪೊಲೀಸರು ಮಹಿಳೆ ಆಟೋ ಹತ್ತಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಕೊನೆಗೂ ಆರೋಪಿ ಸೊಹೇಲ್ ನನ್ನು ಬಂಧಿಸಿದ್ದಾರೆ.
ತಪ್ಪೊಪ್ಪಿಕೊಂಡ ಆರೋಪಿ
ಇನ್ನು ಪೊಲೀಸ್ ವಿಚಾರಣೆ ವೇಳೆ ಆಕೆಯ ಮೇಲಿನ ದೌರ್ಜನ್ಯವನ್ನು ಒಪ್ಪಿಕೊಂಡ ಆರೋಪಿ ಆಕೆಯ ಕಿರುಚಾಟ ತಡೆಯಲು ತಾನೇ ಕಲ್ಲಿನಿಂದ ಹೊಡೆದಿದ್ದಾಗಿ ಹೇಳಿಕೆ ನೀಡಿದ್ದಾನೆ. ಮಹಿಳೆಯ ಮರಣೋತ್ತರ ಪರೀಕ್ಷೆ ವರದಿಯು ಕಲ್ಲಿನಿಂದ ಹೊಡೆದು ಸಾವನ್ನಪ್ಪಿದೆ ಎಂದು ದೃಢಪಡಿಸಿದೆ. ಆಕೆಯ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ ಮತ್ತು ಆಂತರಿಕ ಗಾಯದಿಂದ ಸಾವು ಸಂಭವಿಸಿದೆ ಎಂದು ವರದಿ ಬಂದಿದೆ.