ಮೈಸೂರು: ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದ ಪ್ರಕರಣವನ್ನು ಹಿಂಪಡೆಯುವ ರಾಜ್ಯ ಸರ್ಕಾರದ ಕ್ರಮದ ಪ್ರತಿಪಕ್ಷ ಬಿಜೆಪಿ ಟೀಕಿಸುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಚಿವ ಸಂಪುಟದ ಉಪ ಸಮಿತಿಗಿರುತ್ತದೆ. ಗೃಹ ಸಚಿವರು ಈ ಉಪ ಸಮಿತಿಯ ನೇತೃತ್ವ ವಹಿಸಿದ್ದು, ಸಮಿತಿಯ ವಿವೇಚನೆಯಂತೆ ಹುಬ್ಬಳ್ಳಿ ಗಲಭೆ ಪ್ರಕರಣದ ದೂರನ್ನು ಹಿಂದಕ್ಕೆ ಪಡೆದಿದೆ. ಆದಾಗ್ಯೂ ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇನೆ ಎಂದರು.
ಸರ್ಕಾರದ ಕ್ರಮ ಖಂಡಿಸಿ ಹುಬ್ಬಳ್ಳಿ ಪ್ರತಿಭಟನೆ ನಡೆಸಲಾಗುವುದು ಎಂಬ ಬಿಜೆಪಿ ಹೇಳಿಕೆ ಕುರಿತು ಪ್ರತ್ರಿಕಿಯಿಸಿದ ಮುಖ್ಯಮಂತ್ರಿ, ಬಿಜೆಪಿಯವರು ಕೇವಲ ಸುಳ್ಳು ವಿಚಾರಗಳ ಆಧರಿಸಿಯೇ ಹೋರಾಟ ಮಾಡುತ್ತಾರೆ. ಸತ್ಯದ ಪರವಾಗಿ ಅವರ ಹೋರಾಟ ಎಂದಿಗೂ ಕಾಣಸಿಗುವುದಿಲ್ಲ ಎಂದು ಹೇಳಿದರು.
ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳೂ, ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ, ಟೀಕೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.