ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುಡಾಸ್ತ್ರ ಪ್ರಯೋಗಿಸಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಬಿಜೆಪಿ ಅವಧಿಯಲ್ಲಿನ ಕೋವಿಡ್ ಅಕ್ರಮ ಆರೋಪಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ.
ಕೋವಿಡ್ ಹಗರಣದ (Covid Scam) ತನಿಖೆಗೆ ಎಸ್‌ಐಟಿ ರಚಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಈ ಮೂಲಕ 7,223.64 ಕೋಟಿ ಅಕ್ರಮ ಆರೋಪದ ತನಿಖೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದು ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.
ಕೋವಿಡ್ ಹಗರಣದ ತನಿಖೆ ನಡೆಸಿದ್ದ ಕುನ್ಹಾ ಆಯೋಗದ ಮಧ್ಯಂತರ ವರದಿಯ ಮೇಲೆ ಕ್ರಮ ಕೈಗೊಳ್ಳಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ ಮೂಲಕ ಮುಡಾ ಹಗರಣ ಪ್ರಸ್ತಾಪ ಮಾಡುತ್ತಿರೋ ಬಿಜೆಪಿಗೆ ಕೋವಿಡ್ ಹಗರಣದ ಟಕ್ಕರ್ ಕೊಡುತ್ತಾ ಸರ್ಕಾರ ಎಂಬುದನ್ನು ಕಾದುನೋಡಬೇಕಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದು, ಕೋವಿಡ್ - 19 ಸಾಂಕ್ರಾಮಿಕ ರೋಗ ನಿರ್ವಹಣೆಯ ವೇಳೆ ನಡೆದಿರಬಹುದಾದ ಅವ್ಯವಹಾರಗಳ ತನಿಖೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ನಾ ಅವರ ನೇತೃತ್ವದ ವಿಚಾರಣಾ ಆಯೋಗವು ತನ್ನ ಮೊದಲ ವರದಿ ನೀಡಿದೆ.
ಸದರಿ ವರದಿಯಲ್ಲಿ ಬೃಹತ್ ಪ್ರಮಾಣದ ಹಗರಣ ನಡೆದಿರುವುದಾಗಿ ಉಲ್ಲೇಖಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಬಹುದೆಂದು ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿ, ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.
ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆಗಳು
* ಜಸ್ಟೀಸ್ ಕುನ್ನಾ ಆಯೋಗದ ವರದಿ ಜಾರಿ ಆಗಲೇಬೇಕು
* ವರದಿ ಪ್ರಕಾರ 7223.64 ಕೋಟಿಯ ಅಕ್ರಮ ನಡೆದಿದೆ
* 500 ಕೋಟಿಯನ್ನ ಕಂಪನಿಗಳಿಂದ ವಸೂಲಿ ಮಾಡಬೇಕು
* ಅಕ್ರಮದ ಪಾಲುದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ತೀರ್ಮಾನ
* ಉಪ್ಪು ತಿಂದವರು ನೀರು ಕುಡಿಯುತ್ತಾರೆ.. ಅನುಭವಿಸಲಿ
* ಮಧ್ಯಂತರ ವರದಿ ಶಿಫಾರಸು ಅನ್ವಯ ಎಸ್‌ಐಟಿ ತನಿಖೆ
* ಕೋವಿಡ್ ಅಕ್ರಮದ ತನಿಖೆ ನಡೆಸಲು ಎಸ್‌ಐಟಿ ರಚನೆ
* ಸಂಪುಟ ಉಪಸಮಿತಿ ಮೂಲಕವೂ ತನಿಖೆ, ವಿಚಾರಣೆ