ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುವ ಸರ್ಕಾರದ ನಿರ್ಧಾರವನ್ನು ಸೋಮವಾರ ಸಮರ್ಥಿಸಿಕೊಂಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುವ ಸರ್ಕಾರದ ನಿರ್ಧಾರದ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 43 ಕೇಸ್ ಗಳನ್ನು ವಾಪಸ್ ಪಡೆದಿದ್ದೇವೆ. ಮನವಿ ಮೇರೆಗೆ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯಲಾಗಿದೆ. ಇದನ್ನೂ ಕೋರ್ಟ್ ಗೆ ತಿಳಿಸಬೇಕು. ಕೋರ್ಟ್ ಒಪ್ಪಿದರೆ ಕೇಸ್ ವಾಪಸ್ ತೆಗೆದುಕೊಳ್ಳಲು ಸಾಧ್ಯ. ಇಲ್ಲವಾದರೆ ಇಲ್ಲ. ಈ ಎಲ್ಲ ಹಂತದಲ್ಲೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.
ಬಿಜೆಪಿಯವರು ಆಡಳಿತದಲ್ಲಿದ್ದಾಗಲೂ ಸಹ ಇಂತಹ ಹಲವು ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕೇಸ್ ಗಳಿದ್ದವು. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿಯವರು ಯಾರ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇದರಲ್ಲಿ ಬರೀ ಅಲ್ಪಸಂಖ್ಯಾತರಿಗೆ ಸೇರಿದ ಪ್ರಕರಣಗಳಿವೆಯೇ? ಎಂದು ಪ್ರಶ್ನಿಸಿದ ಪರಮೇಶ್ವರ್, ರೈತರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರತಿಭಟನೆ ಮಾಡಿರುವ ಪ್ರಕರಣಗಳಿವೆ. ಹುಬ್ಬಳ್ಳಿ ಪ್ರಕರಣವನ್ನು ಮಾತ್ರ ಹಿಂಪಡೆದಿದ್ದರೆ ಅಥವಾ 43 ಪ್ರಕರಣಗಳು ಅಲ್ಪಸಂಖ್ಯಾತರಿಗೆ ಸೇರಿರುವ ಪ್ರಕರಣಗಳಾಗಿದ್ದರೆ ಬಿಜೆಪಿಯವರ ಆರೋಪವನ್ನು ಒಪ್ಪಿಕೊಳ್ಳಬಹುದಿತ್ತು. ಆ ರೀತಿ ಮಾಡಲು ಬರುವುದಿಲ್ಲ. ಎಲ್ಲವನ್ನು ಸಮಾನ ದೃಷ್ಟಿಯಿಂದ ನೋಡಬೇಕಾಗುತ್ತದೆ ಎಂದು ಹೇಳಿದರು.
ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆಯುವ ಪ್ರಸ್ತಾವನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೂಕ್ತ ಕಾರ್ಯವಿಧಾನ ಅನುಸರಿಸಿದ ನಂತರ ಸರ್ಕಾರ ಅವುಗಳನ್ನು ಪರಿಶೀಲಿಸುತ್ತದೆ. ನಾನು ಮಾತ್ರ ನಿರ್ಧರಿಸುವವನಲ್ಲ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಮಾತ್ರ ಇದನ್ನು ಮಾಡಲು ಸಾಧ್ಯವಿಲ್ಲ. ಇದರ ಹಿಂದೆ ಹಲವರ ಕೆಲಸವಿರುತ್ತದೆ ಎಂದರು.