ಬೆಂಗಳೂರು: ಮಹದೇವಪುರ ವಲಯದ ಕೆಆರ್ ಪುರಂನ ಹೊರಮಾವು ವಾರ್ಡ್‌ನಲ್ಲಿರುವ ಸಾಯಿಬಾಬಾ ಲೇಔಟ್‌ನಲ್ಲಿ ಪ್ರವಾಹ ಸಂಭವಿಸಿದ ಎರಡು ದಿನಗಳ ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 180 ಮನೆಗಳನ್ನು ಒಳಗೊಂಡಿರುವ ಲೇಔಟ್‌ನಲ್ಲಿ ನೀರು ಹೊರ ಹಾಕುವ ಮತ್ತು ಫಾಗಿಂಗ್ ಕೆಲಸ ಪೂರ್ಣಗೊಳಿಸಿದೆ.
ಹೀಗಾಗಿ ಪ್ರವಾಹದಿಂದಾಗಿ ಸ್ಥಳಾಂತರಗೊಂಡಿರುವ 50 ಮನೆಗಳ ನಿವಾಸಿಗಳಿಗೆ ವಾಪಸ್ ಬರುವಂತೆ ಸೂಚಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ವಿಶೇಷವಾಗಿ ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಶಾಶ್ವತ ಪರಿಹಾರಕ್ಕಾಗಿ ರೈಲ್ವೆ ಇಲಾಖೆ ಸೇತುವೆ ಕಾಮಗಾರಿ ತ್ವರಿತಗೊಳಿಸಬೇಕಿದೆ. ರಕ್ಷಣೆ ಮತ್ತು ಪುನರ್ವಸತಿ ಕಾಮಗಾರಿ ಶುಕ್ರವಾರ ಮುಕ್ತಾಯಗೊಂಡಿದೆ. ಪ್ರವಾಹ ಮತ್ತು ಕೊಳಚೆ ನೀರನ್ನು ಪಂಪ್ ಮಾಡಲು, ಹೂಳು ತೆರವುಗೊಳಿಸಲು, ಬ್ಲೀಚಿಂಗ್ ಪೌಡರ್ ಸೇರಿಸಿದ ನೀರಿನಿಂದ ಮನೆಗಳನ್ನು ಸ್ವಚ್ಛಗೊಳಿಸಲು ಬಿಬಿಎಂಪಿ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಸೊಳ್ಳೆಗಳ ಕಾಟ ತಪ್ಪಿಸಲು ಸಂಜೆ ಫಾಗಿಂಗ್ ಕೂಡ ಮಾಡಲಾಗಿತ್ತು ಎಂದು ಮಹದೇವಪುರ ವಲಯದ ಜಂಟಿ ಆಯುಕ್ತೆ ಕೆ.ದಾಕ್ಷಾಯಿಣಿ ತಿಳಿಸಿದರು.
ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿರುವ ಹೊರಮಾವು ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಯ್ ಮಾತನಾಡಿ, ಹೆಬ್ಬಾಳ-ನಾಗವಾರ ಕಣಿವೆಯ 200 ಅಡಿಯ ನೀರು 20 ಅಡಿ ಸೇತುವೆ ಮೇಲೆ ಹರಿಯುತ್ತದೆ, ಸೇತುವೆ ಕಿರಿದಾಗಿರುವ ಕಾರಣ ಇಡೀ ಬಡಾವಣೆ ಜಲಾವೃತಗೊಳ್ಳುತ್ತದೆ ಇದರಲ್ಲಿ ಬಿಬಿಎಂಪಿಯಿಂದ ಯಾವುದೇ ತಪ್ಪಿಲ್ಲ ಎಂದು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿರುವ ಹೊರಮಾವು ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಯ್ ಹೇಳಿದ್ದಾರೆ.
“ಸಂಪೂರ್ಣವಾಗಿ ಮನೆಗಳು ಜಲಾವೃತಗೊಂಡ 23 ಜನರಿಗೆ ಮೂರು ದಿನಗಳ ಕಾಲ ಹತ್ತಿರದ ಹೋಟೆಲ್‌ಗಳಲ್ಲಿ ವಸತಿ ಒದಗಿಸಲಾಗಿದೆ. ಅಲ್ಲದೆ, ಎಲ್ಲಾ ಪ್ರವಾಹ ಪೀಡಿತ ಮನೆಗಳಿಗೆ ಆಹಾರ ಮತ್ತು ನೀರಿನಂತಹ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗಿದೆ ಎಂದು ವಿನಯ್ ಹೇಳಿದರು. ನೀರು ತೆರವು ಕೆಲಸವನ್ನು ಶೀಘ್ರವಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಅರ್ಕಾವತಿ ಲೇಔಟ್ ಬಳಿಯ ಗೆದ್ದಲಹಳ್ಳಿಗೆ ಸಮಾನಾಂತರವಾಗಿ ಈ ಲೇಔಟ್ ಇದ್ದು, ಉತ್ತಮ ಚರಂಡಿಗಳ ಅಭಿವೃದ್ಧಿಯ ಹೊಣೆ ಬಿಡಿಎ ಮೇಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ರೈಲ್ವೆ ಇಲಾಖೆಯಿಂದ ಗೆದ್ದಲಹಳ್ಳಿಯಲ್ಲಿ ಮಾರ್ಗ ವಿಸ್ತರಿಸಿದಿದ್ದರೆ ಪ್ರತಿ ಮಳೆಯ ಸಂದರ್ಭದಲ್ಲಿ ಸಾಯಿಬಾಬಾ ಲೇಔಟ್ ನಲ್ಲಿ ಪ್ರವಾಹ ಮುಂದುವರಿಯುತ್ತದೆ ಎಂದು ಅಧಿಕಾರಿ ಹೇಳಿದರು.