ಬೆಂಗಳೂರು: ದೇಶದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ Namma Metro 14ನೇ ವರ್ಷಕ್ಕೆ ಕಾಲಿಟ್ಟಿದ್ದು, ಬೆಂಗಳೂರು ನಗರಕ್ಕೆ ಒಂದು ಪ್ರಮುಖ ಸಾರ್ವಜನಿಕ ಸಾರಿಗೆ ವಿಧಾನವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ನಮ್ಮ ಮೆಟ್ರೋ ರೈಲು ಸೇವೆ ಭಾನುವಾರ ತನ್ನ 14 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಕ್ಟೋಬರ್ 20, 2011 ರಂದು ಬೆಂಗಳೂರಿನಲ್ಲಿ ಮೊಟ್ಟ ಮೊದಲ ಮೆಟ್ರೋ ರೈಲು ಸೇವೆ ಪ್ರಾರಂಭವಾಗಿತ್ತು. ಆರಂಭಿಕ ಅವಧಿಯಲ್ಲಿ ಬೈಯಪ್ಪನಹಳ್ಳಿ ಮತ್ತು ಎಂಜಿ ರಸ್ತೆ ನಡುವಿನ 6.7-ಕಿಮೀ ಮಾರ್ಗದಲ್ಲಿ ಮೆಟ್ರೊ ಪ್ರಯಾಣ ನಡೆದಿತ್ತು.
ಬಳಿಕ ಕ್ರಮೇಣ ತನ್ನ ಜಾಲವನ್ನು ಮತ್ತು ಮಾರ್ಗವನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿ ಬೆಂಗಳೂರಿಗರು ಇಂದು ಪೂರ್ಣಗೊಂಡ ಹೊಸ ಮೆಟ್ರೋ ಮಾರ್ಗಗಳನ್ನು ಬಳಕೆ ಮಾಡಲು ಉತ್ಸುಕರಾಗಿದ್ದಾರೆ. ಅಂತೆಯೇ ಇಂದು ಮೆಟ್ರೋರೈಲು ಖ್ಯಾತಿಗೆ ಹೇಗಿದೆ ಎಂದರೆ ಹೊಸ ಹೊಸ ಮಾರ್ಗಗಳಲ್ಲಿ ಮೆಟ್ರೋ ರೈಲು ಸಂಪರ್ಕ ನೀಡುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.
ದೇಶದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ
ಬೆಂಗಳೂರು ಮೆಟ್ರೋ ರೈಲಿನಲ್ಲಿ ನಿತ್ಯ ಸರಾಸರಿ 7.5 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದು ದೇಶದ ಎರಡನೇ ಅತಿದೊಡ್ಡ ಮೆಟ್ರೋರೈಲು ನೆಟ್‌ವರ್ಕ್ ಆಗಿದೆ. ದೆಹಲಿ ಮೆಟ್ರೋ ನಂತರ ಬೆಂಗಳೂರು ಮೆಟ್ರೋ 73.81 ಕಿಮೀ ವ್ಯಾಪ್ತಿ ಮತ್ತು 66 ನಿಲ್ದಾಣಗಳೊಂದಿಗೆ ಭಾರತದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿ ಹೊರಹೊಮ್ಮಿದೆ.
ಮುಂದಿನ ನಾಲ್ಕು ತಿಂಗಳಲ್ಲಿ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು, ನಾಗಸಂದ್ರ ಮತ್ತು ಮಾದಾವರ ನಡುವಿನ 3.14-ಕಿಮೀ ಸಣ್ಣ ಮಾರ್ಗ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಬಹು ನಿರೀಕ್ಷಿತ ಆರ್‌ವಿ ರಸ್ತೆ-ಬೊಮ್ಮಸಂದ್ರ ಸ್ಟ್ರೆಚ್ (ಹಳದಿ ಲೈನ್) ಪ್ರಾರಂಭವಾದರೆ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ದರ ಹೆಚ್ಚಳ ನಿರ್ಧಾರಕ್ಕೆ ಸಮಿತಿ
ಅಂತೆಯೇ ಪ್ರಯಾಣಿಕರ ಸಂಖ್ಯೆಯಲ್ಲಿನ ಉತ್ತೇಜನವು ಬಿಎಂಆರ್‌ಸಿಎಲ್‌ಗೆ ಪ್ರಯಾಣ ದರವನ್ನು ಹೆಚ್ಚಿಸುವ ಬಗ್ಗೆ ಯೋಚಿಸಲು ಧೈರ್ಯ ತುಂಬಿದೆ. ಇದಕ್ಕಾಗಿ ಸಮಿತಿ ರಚಿಸಲಾಗಿದ್ದು, 90 ದಿನಗಳೊಳಗೆ ಶಿಫಾರಸು ಸಲ್ಲಿಸಲಿದೆ ಎಂದು ಹೇಳಲಾಗಿದೆ.
ಸಮಸ್ಯೆಗಳೂ ಇವೆ
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ಟ್ರಿಪ್‌ಗಳ ಆವರ್ತನ(ರೊಟೇಷನ್)ವನ್ನು ಹೆಚ್ಚಿಸಲು ಕೋಚ್‌ಗಳ ಕೊರತೆ. ಪೂರ್ಣಗೊಂಡ ಹಳದಿ ಮಾರ್ಗದಲ್ಲಿ ರೈಲುಗಳ ಕೊರತೆಗೆ ಇದೇ ಕಾರಣ ಎನ್ನಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಸಾರಿಗೆ ತಜ್ಞ ಸಂಜೀವ್ ದ್ಯಾಮ್ಮನವರ್ ಅವರು, "ಬೆಂಗಳೂರು ಮೆಟ್ರೋದ ಪ್ರೋತ್ಸಾಹವು ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿದೆ, ಇದು ಮೆಟ್ರೋ ಸೇವೆಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ತೋರಿಸುತ್ತದೆ. ಅದರ ಸೇವೆಗಳನ್ನು ವ್ಯಾಪಕವಾಗಿ ಬಳಸುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗುತ್ತದೆ. ಅಂತೆಯೇ ಹೆಚ್ಚಿದ ಪ್ರಯಾಣಿಕರೊಂದಿಗೆ, BMRCL ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.
ಮೆಟ್ರೋ ಜಾಲ ವಿಸ್ತರಣೆ
ಕೆಆರ್ ಪುರ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುವ ಹಂತ 2A ಮತ್ತು 2B ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರ ಪ್ರಯಾಣದ ಮಾರ್ಗವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.
ನಾಗವಾರದಿಂದ ಕಾಳೇನ ಅಗ್ರಹಾರದವರೆಗಿನ ಪಿಂಕ್ ಲೈನ್‌ನ ಸುರಂಗ ಕಾರಿಡಾರ್ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಕೊನೆಯ ಸುರಂಗ ಕೊರೆಯುವ ಯಂತ್ರ ಇನ್ನೂ ಕಾರ್ಯನಿರ್ವಹಿಸುತ್ತಿದೆ.
ಹಂತ-3, ಜೆ.ಪಿ.ನಗರದಿಂದ ಹೆಬ್ಬಾಳ ಮತ್ತು ಹೊಸಹಳ್ಳಿಯಿಂದ ಕಡಬಗೆರೆ ಮಾರ್ಗವಾಗಿ ಮಾಗಡಿ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುವ ಎರಡು ಕಾರಿಡಾರ್‌ಗಳೊಂದಿಗೆ 32.15 ಕಿ.ಮೀ ಚಾಲನೆಗೆ ಎರಡು ತಿಂಗಳ ಹಿಂದೆ ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ ಸಿಕ್ಕಿತು.
ಅಂತೆಯೇ ಸರ್ಜಾಪುರ ರಸ್ತೆಯ ಹಂತ-3ಎ ಲೈನ್ ಇನ್ನೂ ರಾಜ್ಯ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ.