ಹಾಸನ: ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದು ಅಕ್ರಮವಾಗಿ ಹಾಸನದಲ್ಲಿ ವಾಸಿಸುತ್ತಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಹಾಸನ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ನುಸುಳಿದ್ದ ಜಮಾಲ್ ಅಲಿ, ಫಾರೂಕ್ ಅಲಿ ಮತ್ತು ಅಕ್ಮಲ್ ಹಬ್ಬು ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮೂವರು, ಹಾಸನದ ಗದ್ದೆಹಳ್ಳ ಎಕ್ಸ್‌ಟೆನ್ಶನ್‌ನಲ್ಲಿರುವ ಜುಬೇರ್ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ಇತ್ತೀಚೆಗೆ ಬೆಂಗಳೂರು ಮೂಲಕ ಹಾಸನಕ್ಕೆ ಬಂದಿದ್ದರು ಎನ್ನಲಾಗಿದೆ.
ಈಶಾನ್ಯ ರಾಜ್ಯಗಳಿಂದ ವಲಸೆ ಬಂದು ಜಿಲ್ಲೆಯ ಕಾಫಿ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿರುವವರ ಆಧಾರ್ ವಿವರಗಳನ್ನು ಜಿಲ್ಲಾಡಳಿತ ಪರಿಶೀಲಿಸಬೇಕು ಎಂದು ಹಲವು ಸ್ಥಳೀಯ ಸಂಸ್ಥೆಗಳ ಸದಸ್ಯರು ಇತ್ತೀಚಿಗೆ ಆಗ್ರಹಿಸಿದ್ದರು.
ಬೇಲೂರು ತಾಲೂಕಿನ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಅರಸಿ ಈಶಾನ್ಯ ರಾಜ್ಯಗಳಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರಿಗೆ ನಕಲಿ ಆಧಾರ್ ಕಾರ್ಡ್ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಮತಾ ಬೇಲೂರಿಗೆ ಭೇಟಿ ನೀಡಿದ್ದರು.
ವಿವಿಧ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಆಧಾರ್ ವಿವರಗಳನ್ನು ಪರಿಶೀಲಿಸುವಂತೆ ಸಕಲೇಶಪುರ ತಾಲೂಕಿನ ಅನೇಕ ಜನರು ಪೊಲೀಸರನ್ನು ಒತ್ತಾಯಿಸಿದ್ದರು.