ಬೆಂಗಳೂರು: ದೇಶದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ಸ್ಲೀಪರ್ ಕೋಚ್ ರೈಲಿನ ಮೂಲ ಮಾದರಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಅನಾವರಣಗೊಳಿಸಿದರು. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟೆಡ್ (ಬೆಮೆಲ್ ) ನಲ್ಲಿ ನಿರ್ಮಾಣವಾಗಿರುವ ವಂದೇ ಭಾರತ್ ಸ್ಲೀಪರ್ ರೈಲು ಮುಂದಿನ ಮೂರು ತಿಂಗಳೊಳಗೆ ಸಂಚಾರ ಪ್ರಾರಂಭಿಸಲಿದೆ. ಅದಕ್ಕೂ ಮುನ್ನಾ ಪ್ರಾಯೋಗಿಕ ಸಂಚಾರ ನಡೆಯಲಿದೆ.
ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಈ ರೈಲು ಸುಧಾರಿತ ಅಪಘಾತ ಸುರಕ್ಷತಾ ವಿನ್ಯಾಸವನ್ನು ಹೊಂದಿದೆ. ಜೊತೆಗೆ ರೈಲು ಬೋಗಿಗಳು ಸೇರಿದಂತೆ ಐಷರಾಮಿ ಸೌಲಭ್ಯದ ಸಂಚಾರ ಅನುಭವ ನೀಡಲಿದೆ.
ವಂದೇ ಭಾರತ್ ಸ್ವೀಪರ್ ರೈಲು ರಾತ್ರಿ ವೇಳೆ 800-1,200 ಕಿ.ಮೀ ದೂರ ಕ್ರಮಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ದರಕ್ಕೆ ಸರಿಸಮವಾಗಿ ವಂದೇ ಭಾರತ್ ಸ್ವೀಪರ್ ದರ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ರೈಲಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಕೋಚ್ ರೈಲು ಅತ್ಯದ್ಭುತವಾದ ವಿನ್ಯಾಸ ಹೊಂದಿದ್ದು, ದೇಶದ ಜನರ ರೈಲು ಪ್ರಯಾಣದಲ್ಲಿ ನವ ಕ್ರಾಂತಿಯನ್ನುಂಟು ಮಾಡುವ ಭರವಸೆಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಆಡಳಿತದಲ್ಲಿ ಭಾರತೀಯ ರೈಲ್ವೆಯು ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ನೀಡಲು ಸಿದ್ಧವಾಗಿ ನಿಂತಿದೆ ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.