ಬೆಳಗಾವಿ: ವಿಚಾರಣಾಧೀನ ಕೈದಿ ನಟ ದರ್ಶನ್ ತೂಗುದೀಪ ಅವರು ಕುರ್ಚಿಯ ಮೇಲೆ ಕುಳಿತು ಒಂದು ಕೈಯಲ್ಲಿ ಮಗ್ ಹಾಗೂ ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿದ್ದ ಫೋಟೋ ವೈರಲ್ ಆದ ಬೆನ್ನಲ್ಲೇ ತಮಗೂ ಬೀಡಿ, ಸಿಗರೇಟ್ ಹಾಗೂ ತಂಬಾಕು ನೀಡುವಂತೆ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳು ಭಾನುವಾರ ಪ್ರತಿಭಟನೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ಸಿಗರೇಟ್ ಸೇದಲು ಅವಕಾಶ ನೀಡಿದ್ದೀರಿ, ನಮಗೂ ಬೀಡಿ, ಸಿಗರೇಟ್ ಮತ್ತು ತಂಬಾಕು ನೀಡಿ ಎಂದು ಆಗ್ರಹಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ತಮ್ಮ ಬೇಡಿಕೆ ಈಡೇರಿಸುವವರೆಗೂ ಉಪಾಹಾರವನ್ನು ಸೇವಿಸುವುದಿಲ್ಲ ಎಂದು ಪಟ್ಟು ಹಿಡಿದರು ಎಂದು ಮೂಲಗಳು ತಿಳಿಸಿವೆ.
ಕೈದಿಗಳ ಈ ಧರಣಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಅಧಿಕಾರಿಗಳು ಕೈದಿಗಳ ಮನವೊಲಿಸಲು ಯತ್ನ ನಡೆಸಿದರಾದರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.
ಪ್ರತಿಭಟನೆ ಕುರಿತು ಉತ್ತರ ವಲಯದ ಕಾರಾಗೃಹದ ಡಿಐಜಿ ಪಿ.ಟಿ.ಶೇಷ ಅವರು ಪ್ರತಿಕ್ರಿಯೆ ನೀಡಿದ್ದು, ಕೈದಿಗಳು ಕಾರಾಗೃಹದಲ್ಲಿದ್ದು, ಯಾವುದೇ ಪ್ರತಿಭಟನೆಗಳು ನಡೆದಿಲ್ಲ, ಸಿಬ್ಬಂದಿಗಳು ಜಾಗರೂಕರಾಗಿದ್ದು, ಪ್ರತಿಭಟನೆ ಸುದ್ದಿ ವದಂತಿಯಷ್ಟೇ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿರುವ ಕಾರಾಗೃಹದ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ದಾಳಿ ನಡೆದಿತ್ತು.
ದಾಳಿ ವೇಳೆ ತಂಬಾಕು ಪ್ಯಾಕೆಟ್, ಸಿಗರೇಟ್, ಮೂರು ಚಾಕುಗಳು, ಸ್ಮಾಲ್ ಹಿಟರ್ ವೈಯರ್ ಬಂಡಲ್, ಎಲೆಕ್ಟ್ರಿಕಲ್ ಒಲೆ ಸೇರಿ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ