ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮತ್ತು ಹೊರಡುವ ಯಾವುದೇ ವಿಮಾನದ ಮೊದಲ ಪ್ರಕಟಣೆ ಕನ್ನಡದಲ್ಲಿರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸೋಮವಾರ ಬೆಂಗಳೂರು ವಿಮಾನ ನಿಲ್ದಾಣ ಕಂಪನಿ ಬಿಐಎಎಲ್ ಗೆ ಸೂಚಿಸಿದ್ದಾರೆ.
ಬಿಐಎಎಲ್‌ನ ಎಂಡಿ ಮತ್ತು ಸಿಇಒ ಹರಿ ಮಾರಾರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಜೋಶಿ, ಕನ್ನಡವನ್ನು ಪ್ರೋತ್ಸಾಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಕನ್ನಡ ರಾಜ್ಯೋತ್ಸವ ನವೆಂಬರ್ 1 ರೊಳಗೆ ಈ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಇದು ಜಾರಿಗೆ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಪ್ರಯಾಣದ ವೇಳೆಯಲ್ಲಿ ಮೊದಲಿಗೆ ಕನ್ನಡ, ನಂತರ ಉಳಿದ ಭಾಷೆಗಳಿಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಬ್ರಿಟಿಷ್ ಏರ್ ವೇಸ್ ಮತ್ತು ಸಿಂಗಾಪುರ್ ಏರ್ ಲೈನ್ಸ್ ಈಗಾಗಲೇ ಇದನ್ನು ಪ್ರಾರಂಭಿಸಿವೆ. ನಾಗರಿಕ ವಿಮಾನಯಾನ ಸಚಿವಾಲಯದಿಂದ ಒಪ್ಪಿಗೆ ಪಡೆಯಬೇಕಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದು, ನಾನು ಕೂಡ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆಯುತ್ತೇನೆ ಎಂದು ಜೋಶಿ ಟಿಎನ್ ಐಎಗೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.20 ರಿಂದ 22 ರವರೆಗೆ ಮಂಡ್ಯದಲ್ಲಿ ನಡೆಸುತ್ತಿದ್ದು, ಕನ್ನಡದಲ್ಲಿ ಬೃಹತ್ ಫಲಕಗಳನ್ನು ಹಾಕಲು ಮತ್ತು ಕರ್ನಾಟಕ ಸಂಸ್ಕೃತಿ, ಅಸ್ಮಿತೆಯನ್ನು ಪ್ರತಿಬಿಂಬಿಸುವ ವಾತಾವರಣವನ್ನು ನಿರ್ಮಿಸಲು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಮೆರಿಕ ಮತ್ತು ಯುರೋಪ್‌ನಿಂದ ಅನೇಕ ಅನಿವಾಸಿ ಕನ್ನಡಿಗರು ಸೇರಿದಂತೆ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ಅವರು ಬಂದಿಳಿದ ಕ್ಷಣದಲ್ಲಿ ಕರ್ನಾಟಕದೊಳಗೆ ಇರುವುದಾಗಿ ಅನಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿರುವುದಾಗಿ ಹೇಳಿದರು.
ಮಾರಾರ್ ಮಾತನಾಡಿ, ಕರ್ನಾಟಕದ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸಲು ಮತ್ತು ಪ್ರೋತ್ಸಾಹಿಸಲು ಬಿಐಎಎಲ್ ಬದ್ಧವಾಗಿದೆ ಎಂದರು.