ಬೆಂಗಳೂರು: ಮದ್ಯ ಸೇವಿಸಿ ವಾಹನ ಚಲಾಯಿಸುವ ಅಥವಾ ಸಂಚಾರ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿ ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಇಲಾಖೆಗೆ ಸೋಮವಾರ ಸೂಚಿಸಿದ್ದಾರೆ.
ಆರೋಗ್ಯ ಇಲಾಖೆ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಸಿಎಂ ಆಪತ್ಕಾಲಯಾನ’ ಯೋಜನೆಗೆ ಆಧುನಿಕ ಜೀವರಕ್ಷಕ ಸವಲತ್ತುಗಳಿರುವ 65 ಆಂಬುಲೆನ್ಸ್‌ಗಳನ್ನು ನೀಡಿದ ನಂತರ ಅವರು ಮಾತನಾಡಿದರು.
ಕಟ್ಟುನಿಟ್ಟಾದ ಸಂಚಾರ ನಿಯಮಗಳಿದ್ದರೂ, ಅನೇಕರು ನಿಯಮ ಉಲ್ಲಂಘಿಸುತ್ತಿದ್ದಾರೆ. ಕೆಲವರ ನಿರ್ಲಕ್ಷ್ಯದಿಂದ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳನ್ನು ತಡೆಯಬಹುದು ಎಂದು ಹೇಳಿದರು.
ಕುಡಿದು ವಾಹನ ಚಲಾಯಿಸುವ ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆಗೆ ಕಠಿಣ ಶಿಕ್ಷೆಯಾಗಬೇಕು. ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪರವಾನಗಿ ರದ್ದು ಮಾಡಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸೂಚನೆ ನೀಡಿದರು.
ಅಪಘಾತದ ನಂತರದ 'ಗೋಲ್ಡನ್ ಅವರ್' ಜೀವ ಉಳಿಸುವಲ್ಲಿ ನಿರ್ಣಾಯಕವಾಗಿದ್ದು, ಹೊಸದಾಗಿ ಪ್ರಾರಂಭಿಸಲಾದ ಆಂಬ್ಯುಲೆನ್ಸ್‌ಗಳು ಪ್ರಥಮ ಚಿಕಿತ್ಸೆ ಮತ್ತು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು ಮಾತನಾಡಿ, ಆಂಬ್ಯುಲೆನ್ಸ್‌ಗಳು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಹೊಂದಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಒದಗಿಸುತ್ತವೆ. 65 ಹೊಸ ಆಂಬ್ಯುಲೆನ್ಸ್‌ಗಳಲ್ಲಿ 26 ವೆಂಟಿಲೇಟರ್‌ಗಳು ಮತ್ತು ಡಿಫಿಬ್ರಿಲೇಟರ್‌ಗಳನ್ನು ಒಳಗೊಂಡಂತೆ ಸುಧಾರಿತ ಜೀವ-ಬೆಂಬಲ ವ್ಯವಸ್ಥೆಯನ್ನು ಹೊಂದಿದೆ. ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳ 65 ಸ್ಥಳಗಳನ್ನು ಗುರುತಿಸಲಾಗಿದ್ದು ಹಂತಹಂತವಾಗಿ ರಾಜ್ಯದ ಎಲ್ಲಡೆ ಇಂತಹ ಆಂಬುಲೆನ್ಸ್ ಪೂರೈಸಲಾಗುತ್ತದೆ ಎಂದು ಹೇಳಿದರು.