ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಹಣ ಬಿಡುಗಡೆ ವಿಚಾರವಾಗಿ ಉಂಟಾಗಿರುವ ಗೊಂದಲ ಇದೀಗ ತಾರಕಕ್ಕೇರಿದ್ದು, ಸರ್ಕಾರದ ವಿರುದ್ಧವೇ ಇದೀಗ ಬೆಂಗಳೂರು ಕರಗ ಸಮಿತಿ ಸದಸ್ಯರು ಕಿಡಿಕಾರಿದ್ದಾರೆ.
ಬೆಂಗಳೂರು ಕರಗ ಮಹೋತ್ಸವಕ್ಕೆ ಮುಜರಾಯಿ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ ಎಂಬ ಆರೋಪ ಇದೀಗ ಕೇಳಿಬಂದಿದ್ದು, ಪರ ಹಾಗೂ ವಿರೋಧ ಹೇಳಿಕೆಗಳಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಕರಗ ಅರ್ಚಕ ಜ್ಞಾನೇಂದ್ರ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
'ನಿಮಗೆ ಕೊಡಲು ಯೋಗ್ಯತೆ ಇಲ್ಲ ಅಂದ್ರೆ ಹೇಳಿ.... ಮುಜರಾಯಿ ಸುಪರ್ದಿಯಿಂದ ದೇವಾಲಯ ಬಿಡಿ'
ಸರ್ಕಾರದಿಂದ ಒಂದು ರೂಪಾಯಿ ಬಂದಿಲ್ಲ. ದೇವಸ್ಥಾನದ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಅರ್ಚಕರು ತಮ್ಮ ಕೈಯಿಂದ ಹಣ ಹಾಕಿ ಕರಗ ಮಾಡುತ್ತಿದ್ದೇವೆ ಎಂದು ಅವರು ಅಲವತ್ತುಕೊಂಡಿದ್ದಾರೆ. ‘ನಾವು ಕೈಯಿಂದ ಹಣ ಹಾಕಿ ಅಲಂಕಾರ ಮಾಡುತ್ತಿದ್ದೇವೆ. ನಾನು 20 ಲಕ್ಷ ರೂ. ಹಣ ಹಾಕಿದ್ದೇನೆ.
ಬಿಬಿಎಂಪಿ ಕಚೇರಿ ಇರುವುದು ಕರಗ ಸಮಿತಿ ಜಾಗದಲ್ಲಿ. ಸೇವೆಯ ರೂಪದಲ್ಲಿ ಬಿಬಿಎಂಪಿ ಸೇವೆ ಮಾಡಿಕೊಂಡು ಬರುತ್ತಿದೆ. ಇಓ (ಆಡಳಿತಾಧಿಕಾರಿ) ತಪ್ಪಿಸಿಕೊಂಡು ತಿರುಗಿದ್ದಾರೆ. ಕಾಣದ ಕೈಗಳು ಕರಗಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿವೆ. ಇದರಿಂದ ತುಂಬಾ ಬೇಸರವಾಗಿದೆ. ಡಿಸಿ ಈ ತನಕ ದೇವಸ್ಥಾನಕ್ಕೆ ಬಂದಿಲ್ಲ. ಡಿಸಿ ಸ್ಥಳ ಪರಿಶೀಲನೆ ಮಾಡಿಲ್ಲ. ಡಿಸಿ ಇಲ್ಲಿ ತನಕ ತಾಯಿ ದರ್ಶನ ಮಾಡಿಲ್ಲ’ ಎಂದು ಪೂಜಾರಿ ಎ.ಜ್ಞಾನೇಂದ್ರ ಸ್ವಾಮಿ ಆರೋಪಿಸಿದ್ದಾರೆ.
'ನಿಮಗೆ ಕೊಡಲು ಸಾಧ್ಯವಿಲ್ಲ ಅಂದ್ರೆ ಹೇಳಿ....
ಇನ್ನು ಹಣ ಬಿಡುಗಡೆ ಗೊಂದಲ ವಿಚಾರವಾಗಿ ಮಾತನಾಡಿರುವ ಕರಗ ಸಮಿತಿ ಅಧ್ಯಕ್ಷ ಸತೀಶ್, 'ಸತತವಾಗಿ 6 ವರ್ಷಗಳಿಂದ ಕರಗ ಮಾಡಿಸುತ್ತಿದ್ದೇನೆ. ಈ ಬಾರಿ ಕರಗ ಶುರುವಾಗಿ 8 ದಿನಗಳು ಆಗಿವೆ. ಪಿ.ಆರ್.ರಮೇಶ್ ಅವರ ಪಿತೂರಿಯಿಂದಲೇ ಹಣ ಬಿಡುಗಡೆಯಾಗಿಲ್ಲ. 40 ಲಕ್ಷ ರೂ. ಯಾರ ಅಕೌಂಟ್ಗೆ ಹೋಯಿತು? ಒಂದು ರೂಪಾಯಿಯನ್ನೂ ಕರಗ ಮಾಡಲು ಕೊಟ್ಟಿಲ್ಲ. ನಿಮಗೆ ಕೊಡಲು ಸಾಧ್ಯವಿಲ್ಲ ಅಂದರೆ, ಆಗಲ್ಲ ಎನ್ನಿ. ನಾವೇ ದುಡ್ಡು ಹಾಕಿ ಕರಗ ಮಾಡಿಕೊಳ್ಳುತ್ತೇವೆ.
ಈಗಾಗಲೇ ಕರಗಕ್ಕೆ 60 ಲಕ್ಷ ರೂ. ಖರ್ಚು ಮಾಡಿದ್ದೇವೆ. ಕರಗ ಪೂಜಾರಿ 20 ಲಕ್ಷ ರೂ. ಕೊಟ್ಟಿದ್ದಾರೆ. ನಾನು 20 ಲಕ್ಷ ರೂಪಾಯಿ ಹಾಕಿದ್ದೇನೆ. ಬಾಲಕೃಷ್ಣ 20 ಲಕ್ಷ ರೂಪಾಯಿ ಹಾಕಿ ಇಲ್ಲಿಯವರೆಗೆ ಖರ್ಚು ಮಾಡಿದ್ದೇವೆ. ಇವರು ಗುತ್ತಿಗೆ ಮಾಡಿರುವುದು ನಾಮಕಾವಸ್ತೆಗೆ. ಗುತ್ತಿಗೆದಾರನಿಗೆ ಪೋನ್ ಮಾಡಿದ್ರೆ ಬೆಳಗಾವಿಯಲ್ಲಿ ಇದ್ದೇನೆ ಎನ್ನುತ್ತಾರೆ. ರಾಜು ಎನ್ನುವವರು ಗುತ್ತಿಗೆ ತೆಗೆದುಕೊಂಡಿದ್ದಾರೆ. ಅವರಿಗೆ ಒಂದು ರೂಪಾಯಿ ಹಣ ರಿಲೀಸ್ ಮಾಡಿಲ್ಲ. ಇಒ ಅಕೌಂಟ್ಗೆ ದುಡ್ಡು ಹಾಕಬೇಕಿತ್ತು. ಆದರೆ ಡಿಸಿ ಅಕೌಂಟ್ಗೆ ದುಡ್ಡು ಹಾಕಿದ್ದಾರೆ. ಇದು ಕೂಡ ನ್ಯಾಯಾಲಯದ ಪ್ರಕಾರ ತಪ್ಪು’ ಎಂದು ಹೇಳಿದ್ದಾರೆ.
ಮುಜರಾಯಿ ಸುಪರ್ದಿಯಿಂದ ದೇವಾಲಯ ಬಿಡಿ.. ನಾವೇ ಮಾಡ್ತೇವೆ..
ಕೋರ್ಟ್ ಆದೇಶದ ಪ್ರಕಾರ ದೇವಸ್ಥಾನದ ಇಒ ಹಾಗೂ ಸಮಿತಿ ನಡೆಸಬೇಕು. ಕರಗ ನಡೆಸಲು ಯೋಗ್ಯತೆ ಇಲ್ಲ ಅಂದರೆ ಬಿಟ್ಟು ಬಿಡಿ. ಮುಜರಾಯಿ ಇಲಾಖೆಯಿಂದ ತೆಗೆದು ನಮ್ಮ ಕೈಗೆ ದೇವಸ್ಥಾನವನ್ನು ಕೊಟ್ಟುಬಿಡಿ. ನಿಮಗೆ ದೇವಾಲಯ ಹುಂಡಿ ದುಡ್ಡು ಬೇಕು. ದೇವಸ್ಥಾನದ ಆಸ್ತಿ ಬೇಕು, ದೇವಸ್ಥಾನದ ಆವರಣದಲ್ಲಿರುವ ಅಂಗಡಿಗಳ ಬಾಡಿಗೆ ಬೇಕು.. ಆದರೆ ಕರಗಕ್ಕೆ ದುಡ್ಡು ಕೊಡಲು ಆಗಲ್ಲ. ನಮ್ಮ 10 ಮನೆಯವರು ದುಡ್ಡು ಹಾಕಿ ಕರಗ ಮಾಡುತ್ತೇವೆ. ದೇವಸ್ಥಾನ ನಮ್ಮ ಕೈಯಲ್ಲೇ ಇದ್ದಿದ್ದರೆ ಯಾವ ಮಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೆವು ಗೊತ್ತಾ..
ಬೇರೆ ಬೇರೆ ಹಳ್ಳಿಗಳಲ್ಲಿ ನೋಡಿ ಅವರೇ ಕೈಯಿಂದ ದುಡ್ಡು ಹಾಕಿಕೊಂಡು ಎಷ್ಟು ವಿಜೃಂಭಣೆಯಿಂದ ಕರಗ ಮಾಡುತ್ತಾರೆ. ನಾವು ನಮ್ಮ ಆಸ್ತಿಯನ್ನು ಸರ್ಕಾರಕ್ಕೆ ಕೊಟ್ಟು ಅವರಿಂದ ಭಿಕ್ಷೆ ಬೇಡಬೇಕಾ. ಇವರಿಗೆ ನಮ್ಮ ದೇವಸ್ಥಾನ ಬೇಕು.. ಜನಾಂಗ ಬೇಕು.. ಆದರೆ ಕರಗಕ್ಕೆ ಹಣ ಮಾತ್ರ ಕೊಡಲ್ಲ.. ಅವರು ಹಣ ಕೊಡಲ್ಲ ಎಂದು ಹೇಳಲಿ ನಾನು ನನ್ನ ಜನಾಂಗ ನಾವೇ ಕೈಯಿಂದ ಹಣ ಹಾಕಿ ಮಾಡುತ್ತೇವೆ. ಮುಜರಾಯಿ ಸುಪರ್ದಿಯಿಂದ ದೇವಸ್ಥಾನ ತೆಗೆಯಲಿ ಎಂದು ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.