ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲಿನ ಪೈಶಾಚಿಕ ಕೃತ್ಯಗಳು ನಿಲ್ಲುತ್ತಿಲ್ಲ. ಹುಬ್ಬಳ್ಳಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಭೀಕರ ಘಟನೆ ನಡೆದಿದೆ. ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಐದು ವರ್ಷದ ಬಾಲಕಿಯ ಶವ ಶೌಚಾಲಯದೊಳಗೆ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಮತ್ತು ಪೋಷಕರು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಿದ್ದಾರೆ. ಬಾಲಕಿಯ ತಂದೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ವರದಿಯಾಗಿದೆ. ಬಾಲಕಿ ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದು ಹೊರೆಗೆ ಮಗು ಆಟವಾಡುತ್ತಿತ್ತು. ಆರೋಪಿ ಬಾಲಕಿಯನ್ನು ಆಮಿಷವೊಡ್ಡಿ ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬಾಲಕಿಯ ಪೋಷಕರು ಕೊಪ್ಪಳದವರಾಗಿದ್ದು, ಪೇಂಟಿಂಗ್ ಕೆಲಸಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು.
ವಕ್ಫ್ ತಿದ್ದುಪಡಿ ಮಸೂದೆ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ದಾವಣಗೆರೆಯಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ವಕ್ಫ್ ಮಸೂದೆ -2025 ರ ವಿರುದ್ಧ ವ್ಯಕ್ತಿಯೊಬ್ಬ ಪ್ರಚೋದನಕಾರಿ ಹೇಳಿಕೆ ನೀಡಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊವನ್ನು ಆಧರಿಸಿ, ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಅಹ್ಮದ್ ಕಬೀರ್ ಖಾನ್ ಮತ್ತು ಆತನ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಪ್ರಕರಣದ ಆರೋಪಿಗಳನ್ನು ಹುಡುಕಲು ತಂಡವನ್ನು ರಚಿಸಲಾಗಿತ್ತು. ಬಾಷಾನಗರದ ಅಬ್ದುಲ್ ಗನಿ, ಮೊಹಮ್ಮದ್ ಜುಬೈರ್ ಬಂಧನಕ್ಕೊಳಗಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಬೀರ್ ಖಾನ್ ಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಕಗ್ಗೋಡದಲ್ಲಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಗೋಶಾಲೆಯಿಂದ ಕಸಾಯಿಖಾಲೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದ್ದು, ದೊಡ್ಡ ಅವ್ಯವಹಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಗರ ಪಾಲಿಕೆ ವಶಪಡಿಸಿಕೊಂಡಿರುವ ಹೆಚ್ಚಿನ ಬಿಡಾಡಿ ದಕರುನಗಳನ್ನು ಕಗ್ಗೋಡು ಗ್ರಾಮದಲ್ಲಿರುವ ಯತ್ನಾಳ್ ಅವರ ಗೋಶಾಲೆಗೆ ಕಳುಹಿಸಲಾಗುತ್ತದೆ. ಗೋಶಾಲೆಯಿಂದ ಯತ್ನಾಳ್ ಅವರು ಕಲಬುರಗಿಗೆ ಅಕ್ರಮವಾಗಿ ಕಸಾಯಿಖಾನೆಗೆ ಕಳುಹಿಸುವ ಮೂಲಕ ದೊಡ್ಡ ವ್ಯವಹಾರ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಅಧಿಕೃತವಾಗಿ ಬಿಡುಗಡೆಗೂ ಮುನ್ನವೇ ಕರ್ನಾಟಕ ಜಾತಿ ಗಣತಿ ವರದಿ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಶಾಸಕರೊಬ್ಬರು ಸೋರಿಕೆಯಾದ ದತ್ತಾಂಶವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ. ಸೋರಿಕೆಯಾಗಿರುವ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ ಮುಸಲ್ಮಾನರು ಏಕೈಕ ಅತಿದೊಡ್ಡ ಸಮುದಾಯವಾಗಿದ್ದು, 76,76,247 ಅಂದರೆ ಒಟ್ಟಾರೆ ಶೇ.12.83 ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಪ್ರಧಾನವಾಗಿರುವ ಒಕ್ಕಲಿಗ ಸಮುದಾಯ ಜನಸಂಖ್ಯಾ ಪಟ್ಟಿಯಲ್ಲಿ ಶೇ.8.47 ರಷ್ಟು ಜನಸಂಖ್ಯೆ ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಕುರುಬರ ಜನಸಂಖ್ಯೆ 44,11,758 ರೊಂದಿಗೆ ಶೇ.7.38 ರಷ್ಟಿದ್ದರೆ, ಎಸ್‌ಸಿ ಎಡ 35,99,895 ರೊಂದಿಗೆ ಶೇ. 6.02 ರಷ್ಟು, ಎಸ್‌ಸಿ ಬಲ 34,98,188 ರೊಂದಿಗೆ ಶೇ.5.85 ರಷ್ಟು, ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ 30,14,696 ರೊಂದಿಗೆ ಶೇ. 5.04% ರಷ್ಟು ಜನ ಸಂಖ್ಯೆ ಹೊಂದಿದೆ.
ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಹಣ ಬಿಡುಗಡೆ ವಿಚಾರವಾಗಿ ಉಂಟಾಗಿರುವ ಗೊಂದಲ ಇದೀಗ ತಾರಕಕ್ಕೇರಿದ್ದು, ಸರ್ಕಾರದ ವಿರುದ್ಧವೇ ಇದೀಗ ಬೆಂಗಳೂರು ಕರಗ ಸಮಿತಿ ಸದಸ್ಯರು ಕಿಡಿಕಾರಿದ್ದಾರೆ. ಸರ್ಕಾರದಿಂದ ಒಂದು ರೂಪಾಯಿ ಬಂದಿಲ್ಲ. ದೇವಸ್ಥಾನದ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಅರ್ಚಕರು ತಮ್ಮ ಕೈಯಿಂದ ಹಣ ಹಾಕಿ ಕರಗ ಮಾಡಿದ್ದೇವೆ, ‘ನಾವು ಕೈಯಿಂದ ಹಣ ಹಾಕಿ ಅಲಂಕಾರ ಮಾಡುತ್ತಿದ್ದೇವೆ. ನಾನು 20 ಲಕ್ಷ ರೂ. ಹಣ ಹಾಕಿದ್ದೇನೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರಗ ನಡೆಸಲು ಯೋಗ್ಯತೆ ಇಲ್ಲ ಅಂದರೆ ಬಿಟ್ಟು ಬಿಡಿ. ಮುಜರಾಯಿ ಇಲಾಖೆಯಿಂದ ತೆಗೆದು ನಮ್ಮ ಕೈಗೆ ದೇವಸ್ಥಾನವನ್ನು ಕೊಟ್ಟುಬಿಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರಗಕ್ಕೆ ಹಣ ಬಿಡುಗಡೆ ವಿಚಾರವಾಗಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಅನುದಾನದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್ಚುವರಿ ಹಣ ಖರ್ಚು ಮಾಡಿದರೂ ಸಹ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.