ಬೆಂಗಳೂರು: ಆಗಸ್ಟ್ 1 ರಿಂದ ಆಟೋ ದರಗಳಲ್ಲಿ ಏರಿಕೆಯಾಗಿದ್ದರೂ, ಹೊಸ ದರಗಳನ್ನು ಆಟೋ ಚಾಲಕರು ನಿರಾಕರಿಸುತ್ತಿದ್ದು, ಮೀಟರ್ ದರ ಅನುಸರಿಸದೆ ಪ್ರಯಾಣಿಕರಿಂದ ದುಪ್ಪಟ್ಟು ವಸೂಲಿ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ಬಸ್, ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳದ ನಂತರ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರು ಮತ್ತು ಸಂಘಟನೆಗಳು ಆಗ್ರಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಕಳೆದ ಜು.14 ರಂದು ಆಟೋ ಪ್ರಯಾಣ ದರ ಹೆಚ್ಚಿಸಿ ಆದೇಶಿಸಿದ್ದರು.
ಆದೇಶದ ಪ್ರಕಾರ ಮೊದಲ 2 ಕಿಮೀ ಪ್ರಯಾಣದ ಮೊತ್ತವು 30 ರು.ನಿಂದ 36 ರು.ಗೆ ಹೆಚ್ಚಳವಾಗಿದ್ದು, ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರೂ.ನಿಂದ 18ರೂ.ಗೆ ಹೆಚ್ಚಿಸಲಾಗಿದೆ.
ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರೂ.ನಿಂದ 10 ರೂ.ಗೆ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರೂ.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ, ದರ ಏರಿಕೆಯಾಗಿದ್ದರೂ ಚಾಲಕರು ಮಾತ್ರ ಹೊಸ ದರವನ್ನು ಸ್ವಾಗತಿಸಲು ಸಿದ್ಧರಿಲ್ಲ. ಮೀಟರ್ ದರ ಅನುಸರಿಸುತ್ತಿಲ್ಲ. ಈಗಲೂ ಹೆಚ್ಚಿನ ಹಣವನ್ನು ಪಾವತಿಸುತ್ತಿದ್ದೇವೆ. ಅಪ್ಲಿಕೇಶನ್‌ಗಳು ಪ್ರತಿ ಪ್ರಯಾಣಕ್ಕೆ ಕನಿಷ್ಠ 40 ರೂ. ದರವನ್ನು ಹೆಚ್ಚಿಸಿವೆ. ಕಡಿಮೆ ದೂರಕ್ಕೆ ಆಟೋಗಳನ್ನು ಹುಡುಕುವುದು ಇನ್ನೂ ಕಷ್ಟ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
ಎಲ್ಲಾ ಅಪ್ಲಿಕೇಶನ್‌ಗಳಲ್ಲಿ ದರಗಳು ಬಹುತೇಕ ದ್ವಿಗುಣಗೊಂಡಿವೆ. 2 ಕಿ.ಮೀ.ಗಿಂತ ಕಡಿಮೆ ದೂರ ಪ್ರಯಾಣಿಸಲು ಕೂಡ ನಾನು 100 ರೂ. ಪಾವತಿಸಿದ್ದೆ, ಮೊದಲು ಅದು 50–60 ರೂ.ಗಳಷ್ಟಿತ್ತು. 3–4 ಕಿ.ಮೀ. ಪ್ರಯಾಣಕ್ಕೂ ಈಗ ಸುಮಾರು 130 ರೂ. ವೆಚ್ಚವಾಗುತ್ತಿದೆ, ಹೊಸ ದರ ಕೇವಲ 72 ರೂ.ಗಳಾಗಿರಬೇಕು ಎಂದು ಪ್ರಯಾಣಿಕರಾದ ಮಂಜು ಎಸ್ ಎಂಬುವವರು ಹೇಳಿದ್ದಾರೆ.
ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಜೆ ಮಾತನಾಡಿ, ಪರಿಷ್ಕೃತ ಘೋಷಿಸಿದಾಗ ಚಾಲಕರು ಈಗಾಲಾದರೂ ಮೀಟರ್ ಅನುಸರಿಸುತ್ತಾರೆಂದು ಭಾವಿಸಿದ್ದೆವು. ಆದರೆ, ಈಗಲೂ ಚಾಲಕರಾಗಲೀ, ಅಪ್ಲಿಕೇಷನ್ ಗಳಾಲ್ಲಾಗಲೀ ಪಾಲಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕೆಲವೆಡೆ ಬೇಡಿಕೆ ಹೆಚ್ಚಿರುವುದರಿಂದ ಈ ರೀತಿಯಾಗುತ್ತಿದೆ. ಆದರೆ, ಇತರೆ ಪ್ರದೇಶಗಳಲ್ಲಿ ಮೀಟರ್ ದರವನ್ನು ಅನುಸರಿಸಲಾಗುತ್ತಿದೆ ಎಂದು ಆಟೋ ಒಕ್ಕೂಟಗಳು ಹೇಳಿವೆ.
ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ರುದ್ರಮೂರ್ತಿ ಅವರು ಮಾತನಾಡಿ, ನಮ್ಮನ್ನು ಸಂಪರ್ಕಿಸದೆ ದರ ಪರಿಷ್ಕರಣೆ ಮಾಡಲಾಗಿದೆ. ಹೀಗಾಗಿ ಶೇ.90ರಷ್ಟು ಆಟೋ ಚಾಲಕರು ಆ್ಯಪ್ ಗಳನ್ನು ಅನುಸರಿಸುತ್ತಿದ್ದಾರೆ. ಇದರಿಂದ ಅವರಿಗೆ ಆದಾಯ ಗಳಿಸುತ್ತಿದ್ದಾರೆಂದು ಹೇಳಿದ್ದಾರೆ.
ಹೊಸ ದರಗಳನ್ನು ನಾವು ಅನುಸರಿಸುವುದಿಲ್ಲ. "ಆ್ಯಪ್‌ಗಳಿಂದ ನನಗೆ ಉತ್ತಮ ಹಣ ಸಿಗುತ್ತದೆ, ಚೌಕಾಶಿ ಮಾಡುವುದನ್ನು ತಪ್ಪುತ್ತದೆ. ನನಗೆ ಇಷ್ಟವಾದ ಮಾರ್ಗವನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಚಾಲಕ ಶಬೀಬ್ ಹೇಳಿದ್ದಾರೆ.
ಇಂದಿರಾನಗರ ಮೆಟ್ರೋ ಮತ್ತು ದೊಮ್ಮಲೂರು ನಡುವೆ ಪ್ರಯಾಣಿಸುವ ಎಂಜಿನಿಯರ್ ಮೊಹಮ್ಮದ್ ಜಮಾಲ್ ಅವರು ಮಾತನಾಡಿ, ಸಣ್ಣ ಟ್ರಿಪ್ ಗಳನ್ನು ಆಟೋ ಚಾಲಕರುನಿರಾಕರಿಸುತ್ತಾರೆ. ಈ ವೇಳೆ ಆ್ಯಪ್ ಗಳಲ್ಲಿ ಚಾಲಕರಿಗೆ ಕನಿಷ್ಠ 30 ರೂ. ಟಿಪ್ ನೀಡಬೇಕಾಗುತ್ತದೆ. ಟಿಪ್ ನೀಡಿದ ಕೆಲವೇ ನಿಮಿಷಗಳಲ್ಲಿ ಆಟೋ ಬುಕ್ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.