ಬಾಗಲಕೋಟೆ: ಶಾಲೆಗೆ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ ಪ್ರಾಂಶುಪಾಲರು ಜಾತಿ ತಾರತಮ್ಯ ಮಾಡುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರಾಂಶುಪಾಲರಾದ ಗೀತಾ ಕಾಪಸೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಾಲಕರು ಮತ್ತು ಬಾಲಕಿಯರು ಭಾಗವಹಿಸಿದ್ದರು.
ಶಾಲೆಯಿಂದ ನವನಗರ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರಾಂಶುಪಾಲರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಬ್ಲಾಕ್ ಶಿಕ್ಷಣಾಧಿಕಾರಿ ಎಂಎಸ್ ಬಡದಾನಿ ಶಾಲೆಗೆ ಭೇಟಿ ನೀಡಿ ದೂರುಗಳನ್ನು ಸ್ವೀಕರಿಸಿದರು. ಪರಿಸ್ಥಿತಿ ಶಾಂತಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು, ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಇಲ್ಲ. ತರಗತಿ ಕೊಠಡಿಗಳಲ್ಲಿ ಸರಿಯಾದ ಗಾಳಿ ಮತ್ತು ಶೌಚಾಲಯ ಇಲ್ಲದೆ ನೈರ್ಮಲ್ಯದ ಕೊರತೆ ಹೆಚ್ಚಾಗಿದೆ. ಮೊಟ್ಟೆ, ಬಾಳೆಹಣ್ಣಿನ ಕಳಪೆ ವಿತರಣೆ ಸೇರಿದಂತೆ ಮಧ್ಯಾಹ್ನದ ಊಟದ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆಯೂ ವಿದ್ಯಾರ್ಥಿಗಳು ದೂರು ನೀಡಿದರು.