ಬೆಂಗಳೂರು: 2024 ರ ಲೋಕಸಭಾ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಶುಕ್ರವಾರ ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದೆ.
ಬಿಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರು ನಾಪತ್ತೆಯಾಗಿದೆ ಹಾಗೂ ಮಹಾರಾಷ್ಟ್ರದಲ್ಲಿ ಮತದಾರರ ಸೇರ್ಪಡೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಕಾಂಗ್ರೆಸ್ ಹೋರಾಟಕ್ಕೆ ಸಜ್ಜಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವ್ಯವಸ್ಥಿತ ಮತಕಳ್ಳತನದ ವಿರುದ್ಧ ದೇಶಾದ್ಯಂತ ನಡೆಯುವ ಪ್ರತಿಭಟನಾ ಅಭಿಯಾನದ ಭಾಗವಾಗಿ ಬೆಂಗಳೂರಿನಲ್ಲಿ ಆ. 8 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನಾ ಸಮಾವೇಶದ ಪೂರ್ವಭಾವಿ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಡಿ,ಕೆ ಶಿವಕುಮಾರ್ ಮತ ಕಳ್ಳತನದ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ನಡೆಯಲಿರುವ ಪ್ರತಿಭಟನೆಗೆ ರಾಹುಲ್ ಗಾಂಧಿ ಬೆಳಿಗ್ಗೆ 10:30 ರ ವೇಳೆಗೆ ಆಗಮಿಸಲಿದ್ದಾರೆ. ನಮ್ಮ ನಾಯಕರು ಭಾರತೀಯ ಚುನಾವಣಾ ಆಯೋಗದ ಮುಂದೆ ಮತ ಕಳ್ಳತನದ ಪುರಾವೆಗಳನ್ನು ಇಡಲಿದ್ದಾರೆ. ನಾನು ಈಗ ವಿವರಗಳನ್ನು ಚರ್ಚಿಸುವುದಿಲ್ಲ. ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಬೆಂಗಳೂರು ಹೊರತುಪಡಿಸಿ ಪ್ರತಿ ಜಿಲ್ಲೆಯಿಂದ 50 ಜನ ಕಾರ್ಯಕರ್ತರು ಹಾಗೂ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದೇವೆ ಎಂದು ಹೇಳಿದರು. ಇಂಡಿಯಾ ಬ್ಲಾಕ್ ಸಭೆ ಇಲ್ಲಿಯೇ ನಡೆದಿತ್ತು ಎಂಬುದನ್ನು ನೆನಪಿಡಿ ಎಂದು ಶಿವಕುಮಾರ್ ಹೇಳಿದರು.
ಪ್ರಜಾಪ್ರಭುತ್ವದ ಮೇಲಿನ ಗಂಭೀರ ದಾಳಿ ಎಂದು ಕರೆದಿರುವ ರಾಜ್ಯಸಭಾ ಸಂಸದ ಡಾ. ಸೈಯದ್ ನಸೀರ್ ಹುಸೇನ್ ಈ ಪ್ರಕರಣದ ಪರಿಶೀಲನೆಯಿಂದ ಕೇಂದ್ರ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್ ಎತ್ತಿದ ಪ್ರಶ್ನೆಗಳನ್ನೇ ನಾವು ಎತ್ತುತ್ತಿದ್ದೇವೆ. ಒಂದು ರಾಜ್ಯದಲ್ಲಿ, ಅವರು ಮತದಾರರನ್ನು ಸೇರಿಸುವ ಮೂಲಕ ಚುನಾವಣೆಗಳನ್ನು ಗೆಲ್ಲುತ್ತಾರೆ. ಇನ್ನೊಂದು ರಾಜ್ಯದಲ್ಲಿ, ಮತದಾರರ ಹೆಸರನ್ನು ಅಳಿಸುವ ಮೂಲಕ ಗೆಲ್ಲುತ್ತಾರೆ. ಪ್ರಕರಣ ನ್ಯಾಯಾಲಯದ ಮುಂದೆ ಇದೆ ಎಂದು ಹೇಳುವ ಕುಂಟು ನೆಪಗಳೊಂದಿಗೆ ಸರ್ಕಾರ ಎಸ್‌ಐಆರ್ ಬಗ್ಗೆ ಚರ್ಚಿಸುವುದರಿಂದ ಓಡಿಹೋಗಬಾರದು ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮೂರು ತಿಂಗಳೊಳಗೆ ಲಕ್ಷಾಂತರ ಮತದಾರರನ್ನು ಸೇರಿಸಲಾಗಿದೆ ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆರೋಪಿಸಿದರು, ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿ ಅಸಮಾನವಾಗಿ ಹೆಚ್ಚಿನ ಸೇರ್ಪಡೆಗಳಿವೆ. ಬಿಹಾರದಲ್ಲಿ, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನೆಪದಲ್ಲಿ ಲಕ್ಷಾಂತರ ಮತದಾರರ ಹೆಸರನ್ನು ಅಳಿಸಲು ಎಸ್‌ಐಆರ್ ಬಳಸಲಾಗಿದೆ ಎಂದು ವರದಿಯಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿಯೂ ಮತಗಳ್ಳತನ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು SIR ಕಾರ್ಯಸೂಚಿಯ ತುರ್ತು ಪರಿಶೀಲನೆಯಿಂದ ತಪ್ಪಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಈ ಕಸರತ್ತು ನಡೆಸುತ್ತಿದ್ದಾರೆ . ಹೀಗಾಗಿ ಈ ಸಂಬಂಧ ನಾವು ಚರ್ಚೆಗೆ ಒತ್ತಾಯಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಈ ವಿಷಯವು ವಿಚಾರಣೆಗೆ ಒಳಪಟ್ಟಿದ್ದು, ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ಈ ಕುರಿತು ಚರ್ಚೆಗೆ ಅವಕಾಶ ನೀಡಲು ಮಾಜಿ ಉಪಾಧ್ಯಕ್ಷ ಜಗದೀಪ್ ಧಂಖರ್ ಅನುಮತಿ ನೀಡಿದ್ದರು ಎಂಬುದನ್ನು ಕಾಂಗ್ರೆಸ್ ತಿಳಿಸಿದೆ.
ರಾಜ್ಯಸಭೆಯಲ್ಲಿ ಎಲ್‌ಒಪಿ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ವಿರೋಧ ಪಕ್ಷಗಳ ಸದನ ನಾಯಕರೊಂದಿಗೆ ಕಾರ್ಯತಂತ್ರದ ಸಭೆಗಳನ್ನು ನಡೆಸಿದ್ದಾರೆ. SIR ವಿಷಯವನ್ನು ಸಂಸತ್ತಿನಲ್ಲಿ ಪ್ರಮುಖ ಆದ್ಯತೆಯಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.