ಬೆಂಗಳೂರು: ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.
ಸಮಾವೇಶದ ನಂತರ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಮತಗಳ್ಳತನದ ಕುರಿತಂತೆ ದಾಖಲೆ ಸಹಿತ ದೂರು ನೀಡಲಿದ್ದಾರೆ.
ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದ್ದು, ಮತಗಳವಿಗೆ ನೆರವು ನೀಡುತ್ತಿದೆ ಎಂದು ರಾಹುಲ್ ಆರೋಪಿಸಿದ್ದರು. ಅದರ ಕುರಿತು ಜನಾಂದೋಲನ ಸೃಷ್ಟಿಯಾಗುವಂತೆ ಮಾಡಲು ಕಾಂಗ್ರೆಸ್ ಇಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತಿದೆ.
ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಸಮಾವೇಶದಲ್ಲಿ ರಾಹುಲ್ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ದೇಶದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಪ್ರತಿಭಟನಾ ಸಮಾವೇಶಕ್ಕಾಗಿ ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಕಟ್ಟಡದ ತಳ ಮಹಡಿಯಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಜೊತೆಗೆ ಸಾರ್ವಜನಿಕರಿಗಾಗಿ 8 ಸಾವಿರ ಆಸನಗಳನ್ನು ಅಳವಡಿಸಲಾಗಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿಯೂ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ವೇದಿಕೆ ಕಾರ್ಯ ಕ್ರಮ ವೀಕ್ಷಣೆಗಾಗಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದು, 10.30ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ಅದಾದ ನಂತರ ನೇರವಾಗಿ ಸ್ವಾತಂತ್ರ್ಯ 25 ಉದ್ಯಾನದ ಪ್ರತಿಭಟನಾ ಸಮಾವೇಶದ ಸ್ಥಳಕ್ಕಾಗಮಿಸಲಿದ್ದಾರೆ.
ಇನ್ನು, ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಅಕ್ರಮ ಮತ್ತು ಮತಗಳುವಿನ ಕುರಿತು ವಿವರಗಳನ್ನು ನೀಡಲಿದ್ದಾರೆ. ಅದರಲ್ಲೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಕಲಿ ಮತದಾರರು, ಮತ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪಸೇರಿದಂತೆ ಹಲವು ಗಂಭೀರ ವಿಚಾರಗಳನ್ನು ಜನರ ಮುಂದಿಡಲಿದ್ದಾರೆ.
ಜೊತೆಗೆ ಗುರುವಾರ ದೆಹಲಿಯಲ್ಲಿ ಬಿಡುಗಡೆ ಮಾಡಲಾದ ದಾಖಲೆಗಳ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಶುಕ್ರವಾರವೂ ಪ್ರದರ್ಶಿಸಲಿದ್ದಾರೆ. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಮತಗಳ್ಳತನ ಕುರಿತಂತೆ ವಿವರಣೆ ನೀಡಲಿದ್ದಾರೆ.
ಪ್ರತಿಭಟನಾ ಸಮಾವೇಶವು ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ಅದಾದ ನಂತರ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮತ್ತಿತರ ನಾಯಕರನಿಯೋಗ ಶೇಷಾದ್ರಿ ರಸ್ತೆಯಲ್ಲಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಮತಗಳವು ಮತ್ತು ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ಆರೋಪಗಳ ಕುರಿತ ದಾಖಲೆ ಸಹಿತ ದೂರನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.
ಫ್ರೀಡಂ ಪಾರ್ಕ್ ಸುತ್ತ ಸಂಚಾರ ಬದಲು
ಕಾಂಗ್ರೆಸ್ ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ಸ್ವಾತ್ರಂತ್ರ್ಯ ಉದ್ಯಾನದ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಪೊಲೀಸರು ಬದಲಾವಣೆ ಮಾಡಿದ್ದಾರೆ.
ಫ್ರೀಡಂಪಾರ್ಕ್ ಮಾರ್ಗದ ಶೇಷಾದ್ರಿ ರಸ್ತೆ ವ್ಯಾಪ್ತಿಯಲ್ಲಿ ಸಂಚರಿಸುವ ನಾಗರಿಕರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಸಂಚಾರ ಬದಲಾವಣೆಗೆ ಸಹಕರಿಸುವಂತೆ ಜನರಲ್ಲಿ ಸಂಚಾರ ವಿಭಾಗದ ಪೊಲೀಸರು ಕೋರಿದ್ದಾರೆ.
ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ಬದಲಾವಣೆಗಳನ್ನು ಮಾಡಲಾಗಿದೆ. ಪ್ರತಿಭಟನೆಗೆ ವಿವಿಐಪಿಗಳ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ರಸ್ತೆಗಳಲ್ಲಿ ವಾಹನಗಳ ನಿಯೋಜನೆಯನ್ನು ನಿಷೇಧಿಸಲಾಗಿದೆ. ಪ್ರತಿಭಟನೆಗೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
12 ಡಿಸಿಪಿಗಳು, 45 ಎಸಿಪಿಗಳು, 128 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 421 ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳು, 591 ಮಹಿಳಾ ಪೊಲೀಸ್ ಸಿಬ್ಬಂದಿ, 14 ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತುಕಡಿಗಳು ಮತ್ತು ಎರಡು ಮಹಿಳಾ ತುಕಡಿಗಳು ಸೇರಿದಂತೆ ಸುಮಾರು 4459 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಚಾರ (ಪಶ್ಚಿಮ) ವಿಭಾಗದ ಡಿಸಿಪಿ ಕಚೇರಿಯಿಂದ ಹೊರಡಿಸಲಾದ ಸಂಚಾರ ಸಲಹೆ ಇಂತಿದೆ;
ನಿರ್ಬಂಧಿತ ರಸ್ತೆ
ಶಾಂತಲಾ ಜಂಕ್ಷನ್ ಮತ್ತು ಖೋಡೆ ಸರ್ಕಲ್ ನಿಂದ ಆನಂದ ರಾವ್ ಮೇಶ್ವೇತುವೆ, ಹಳೇ ಜೆಡಿಎಸ್ ಕ್ರಾಸ್, ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್ ಸಾಗುವ ರಸ್ತೆ.
ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆ.
ಚಾಲುಕ್ಯ ಸರ್ಕಲ್ ನಿಂದ ಮೈಸೂರು ಬ್ಯಾಂಕ್ ಕಡೆಗೆ
ಕಾಳಿದಾಸ ರಸ್ತೆ ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು.
ಮೌರ್ಯ ಸುಬ್ಬಣ್ಣ ಜ ನಿಂದ ಫ್ರೀಡಂ ಪಾರ್ಕ್ ಕಡೆ.
ಪರ್ಯಾಯ ಮಾರ್ಗ
ಸುಬ್ಬಣ್ಣ ಜಂಕ್ಷನ್‌ನಿಂದ ಬಲತಿರುವು ಪಡೆದು ಆನಂದ್ ರಾವ್ ಸರ್ಕಲ್ ಕಡೆಗೆ ಸಂಚರಿಸಿ
ಲುಲು ಮಾಲ್, ಕೆಎಫ್‌ಎಂ, ರಾಜೀವ್ ಗಾಂಧಿ ಸರ್ಕಲ್, ಮಂತ್ರಿಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರ, ನೆಹರು ಸರ್ಕಲ್, ರೇಸ್ ಕೋರ್ಸ್ ಬ್ರಿಡ್ಜ್ ಮತ್ತು ರಸ್ತೆ ಮೂಲಕ ಸಂಚರಿಸುವುದು.
ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್, ಕೆ.ಜಿ.ಜಂಕ್ಷನ್, ಎಲೈಟ್, ಟಿಬಿ ರಸ್ತೆ, ಕೆ.ಎಫ್.ಎಂ. ರಾಜೀವ್ ಗಾಂಧಿ ಸರ್ಕಲ್, ನೆಹರು ಸರ್ಕಲ್, ರೇಸ್ ಕೋರ್ಸ್ ಬ್ರಿಡ್ಜ್ ಮೂಲಕ ಸಾಗಬೇಕು.
ಚಾಲುಕ್ಯ ಸರ್ಕಲ್, ಎಲ್ ಆರ್‌ಡಿ, ರಾಜಭವನ ರಸ್ತೆ, ಇನ್ವೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ನಿಂದ ತೆರಳುವುದು.
ಕನಕದಾಸ ಜಂಕ್ಷನ್ ಬಲ ತಿರುವು ಪಡೆದು ಸಾಗರ ಜಂಕನ್ ಕಡೆಗೆ ಸಂಚರಿಸಬಹುದು.