ಬೆಂಗಳೂರು: ಜುಡಿಷಿಯಲ್ ಲೇಔಟ್‌ನ ಮಹಿಳಾ ಪೇಯಿಂಗ್ ಗೆಸ್ಟ್ ವಸತಿ ಗೃಹಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಬೆಸ್ಕಾಂ ಸಹಾಯಕ ಎಂಜಿನಿಯರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ದರೋಡೆ ನಡೆಸಿರುವ ಘಟನೆಯೊಂದು ಸೋಮವಾರ ನಡೆದಿದೆ.
ಶಿವಾಸ್ ಲೇಡೀಸ್ ಪಿಜಿಯ ಮೂರನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಬೆಸ್ಕಾಂ ಸಹಾಯಕ ಎಂಜಿನಿಯರ್ ಇದ್ದು, ಮಧ್ಯಾಹ್ನ 3 ರಿಂದ 3.30 ರ ನಡುವೆ ಈ ಘಟನೆ ನಡೆದಿದೆ.
ಬಾಗಿಲು ಬಡಿಯುವ ಸದ್ದು ಕೇಳಿದ ಮಹಿಳೆ, ಪಿಜಿಯಲ್ಲಿರುವವರೇ ಯಾರೋ ಎಂದು ಭಾವಿಸಿ ಬಾಗಿಲು ತೆರೆದ್ದಾರೆ. ಕೂಡಲೇ ಅವರನ್ನು ಒಳಗೆ ತಳ್ಳಿರುವ ದುಷ್ಕರ್ಮಿಗಳು, ಚಾಕು ತೋರಿಸಿ ಬೆದರಿಸಿ ಬಾಗಿಲು ಮುಚ್ಚಿದ್ದಾರೆ.
ಬಳಿಕ ಲೈಂಗಿಕ ದೌರ್ಜನ್ಯ ನಡೆಸಿ, ಅವರ ಬಳಿಯಿದ್ದ ಚಿನ್ನದ ಬಳೆಗಳನ್ನು ತೆಗೆದುಕೊಡುವಂತೆ ಹೇಳಿದ್ದಾರೆ. ತೆಗೆಯಲು ಸಾಧ್ಯವಾಗದಿದ್ದಾಕ ಹಣ ನೀಡುವಂತೆ ಹೇಳಿದ್ದಾನೆ. ಬಳಿಕ ಹಾಸಿಗೆಯ ಮೇಲಿದ್ದ ವ್ಯಾನಿಟಿ ಬ್ಯಾಗ್‌ನಿಂದ ಹಣ ತೆಗೆದುಕೊಳ್ಳಲು ಯತ್ನಿಸಿದಾಗ, ಮಹಿಳೆ ಬಾತ್ರೂಮ್ ಒಳಗೆ ಹೋಗಿ ಲಾಕ್ ಮಾಡಿಕೊಂಡಿದ್ದಾರೆ.
ನಂತರ ಸಹಾಯಕ್ಕಾಗಿ ಕೂಡಲು ಪ್ರಾರಂಭಿಸಿದಾಗ, ಆರೋಪಿ ಹಾಸಿಗೆಯ ಮೇಲಿದ್ದ ಆಕೆಯ ಎರಡು ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಬೆಸ್ಕಾಂ ಸಹಾಯಕ ಎಂಜಿನಿಯರ್ ಆಗಿರುವ ಮಹಿಳೆ, ಹದಿನೈದು ದಿನಗಳ ಹಿಂದಷ್ಟೇ ಪಿಜಿ ಸೇರಿದ್ದರು ಎಂದು ತಿಳಿದುಬಂದಿದೆ.
ಪಿಜಿ ಪಕ್ಕದಲ್ಲಿ ಎರಡೂ ಫೋನ್ ಗಳು ಪತ್ತೆಯಾಗಿವೆ. ಆರೋಪಿ ಫೋನ್ ಗಳನ್ನು ಎಸೆದು ಪರಾರಿಯಾಗಿದ್ದಾನೆ. ಆರೋಪಿಗಳು ಮಹಿಳೆಯ ಚಲನವಲನಗಳನ್ನು ಗಮನಿಸಿರಬೇಕು. ದುಷ್ಕರ್ಮಿಗಳ ಪತ್ತೆಗೆ ಪಿಜಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ (ಈಶಾನ್ಯ) ವಿಜೆ ಸಜೀತ್ ಅವರು ಹೇಳಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.