ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಮೂಲಸೌಕರ್ಯ ಯೋಜನೆ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾಗ ಸುರಂಗ ರಸ್ತೆ ಯೋಜನೆಯ ಬಗ್ಗೆ ಮನವಿ ಸಲ್ಲಿಸುವಂತೆ ಹೇಳಿದರು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುರುವಾರ ವಿಧಾನ ಪರಿಷತ್ ಗೆ ತಿಳಿಸಿದ್ದಾರೆ.
ಇಂದು ವಿಧಾನ ಪರಿಷತ್‌ನಲ್ಲಿ ಬೆಂಗಳೂರಿನ ಮಹತ್ವಾಕಾಂಕ್ಷಿ ಸುರಂಗ ರಸ್ತೆ ಯೋಜನೆ ತೀವ್ರ ಚರ್ಚೆಗೆ ಗ್ರಾಸವಾಯಿತು. ಇದು ಹಣ ಹೊಡೆಯುವ ಯೋಜನೆಯಲ್ಲ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ 'ಸಾಕ್ಷಿ ಗುಡ್ಡೆ' ಬಿಟ್ಟು ಹೋಗುವ ನನ್ನ ಕನಸು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಪ್ರಧಾನಿ ಮೋದಿ ಮತ್ತು ನಿತಿನ್ ಗಡ್ಕರಿಯವರೇ ನನಗೆ ಬೆಂಬಲ ಸೂಚಿಸಿದ್ದಾರೆ ಎಂದ ಡಿಕೆ ಶಿವಕುಮಾರ್ ಅವರು ಹೇಳಿದರು. ಈ ವೇಳೆ ಸಿ.ಟಿ. ರವಿ ಅವರು 'ಲಾಭವಿಲ್ಲದೆ ಡಿಕೆಶಿ ಏನೂ ಮಾಡಲ್ಲ' ಎಂದರು. 'ಲಾಭ ನೋಡೋನು ನೀನು, ನಾನು ಪಕ್ಷದ ಹೆಸರು ನೋಡುವವನು' ಎಂದು ಖಾರವಾಗಿಯೇ ತಿರುಗೇಟು ನೀಡಿದರು.
ಸುರಂಗ ರಸ್ತೆ ಯೋಜನೆ, ಅದರ ಕಾರ್ಯಸಾಧ್ಯತೆ, ಡಿಪಿಆರ್‌ನಲ್ಲಿನ ದೋಷ ಕುರಿತು ಬಿಜೆಪಿ ಸದಸ್ಯ ಸಿ.ಟಿ. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ರಾಗಿಗುಡ್ಡ ಡಬಲ್ ಡೆಕ್ಕರ್ ಯೋಜನೆಯಿಂದ ಪ್ರಧಾನಿ ಪ್ರಭಾವಿತರಾಗಿದ್ದಾರೆ ಮತ್ತು ಮುಂದುವರಿಯುವಂತೆ ಸೂಚಿಸಿದರು ಎಂದು ತಿಳಿಸಿದರು.
ಈಗ, ಕರ್ನಾಟಕ ಸರ್ಕಾರ ಬೆಂಗಳೂರನಲ್ಲಿ 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಯೋಜನೆಯ ರೂಪಿಸುತ್ತಿದೆ ಎಂದು ಡಿಸಿಎಂ ಹೇಳಿದರು.
"ಭಾರತವನ್ನು ಬೆಂಗಳೂರಿನ ಮೂಲಕ ನೋಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು ಮತ್ತು ಮಾಜಿ ಪ್ರಧಾನಿ ವಾಜಪೇಯಿ ಹೇಳಿದ್ದನ್ನು ಪ್ರತಿಧ್ವನಿಸಿದರು. ಆದ್ದರಿಂದ ಸುರಂಗ ರಸ್ತೆ ಯೋಜನೆಗೆ ನಾವು ಅವರಿಗೆ ಹಣ ನೀಡುವಂತೆ ಕೇಳಿದೆವು. ಅದಕ್ಕೆ ಅವರು ಮನವಿ ನೀಡಿ, ಅದನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದರು.
25 ವರ್ಷಗಳ ಹಿಂದೆ ತಾವು ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು, ಈಗ ಅದು 1.40 ಕೋಟಿಗೆ ತಲುಪಿದೆ. ವಾಹನ ಸಂಖ್ಯೆ 1.23 ಕೋಟಿ ಇದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಸಾಫ್ಟ್‌ವೇರ್ ಎಂಜಿನಿಯರ್‌ಗಳಿದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಸಾಫ್ಟ್‌ವೇರ್ ಎಂಜಿನಿಯರ್‌ಗಳಿದ್ದಾರೆ ಎಂದರು.
ನಗರದಲ್ಲಿ ಸಂಚಾರ ಸುಗಮಗೊಳಿಸಲು, ಸುರಂಗ ರಸ್ತೆ, ಡಬಲ್ ಡೆಕ್ಕರ್ ಮತ್ತು ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಯೋಜನೆ ರೂಪಿಸಲಾಗಿದೆ ಎಂದರು.
ಸುರಂಗ ಮಾರ್ಗವು 14 ಮೀಟರ್ ಅಗಲವಿದ್ದು, 3 ವಾಹನಗಳು ಮತ್ತು ತುರ್ತು ಆಧಾರದ ಮೇಲೆ ಹೆಚ್ಚುವರಿ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸಬಹುದು ಮತ್ತು ಪೂರ್ಣಗೊಂಡ ನಂತರ, ಇದು ಅತಿ ಉದ್ದದ ಸುರಂಗವಾಗಲಿದೆ ಮತ್ತು ಪ್ರತಿ ಯೂನಿಟ್‌ಗೆ ಇದರ ವೆಚ್ಚ 770 ಕೋಟಿ ರೂ. ಎಂದು ಡಿಸಿಎಂ ಹೇಳಿದರು