ಧಾರವಾಡ: ಪೇಂಟ್ ತೆಳು ಮಾಡಲು ಬಳಸುವ ಥಿನ್ನರ್ ಬಾಟಲಿ ಜಾರಿ ಬಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 4 ವರ್ಷದ ಮಗು ಹಾಗೂ ತಂದೆ ಸಾವನ್ನಪ್ಪಿರುವ ಘಟನೆ ಧಾರವಾಡದ ಸಂತೋಷ್ ನಗರದಲ್ಲಿ ನಡೆದಿದೆ.
ಮೃತರನ್ನು ಅಗಸ್ತ್ಯ (4), ಚಂದ್ರಕಾಂತ್ ಮಾಶ್ಯಾಳ ಎಂದು ಗುರ್ತಿಸಲಾಗಿದೆ. ಮನೆಯಲ್ಲಿ ಕಳೆದ ಶುಕ್ರವಾರ (ಆ.15) ಬೆಂಕಿ ಕಾಯಿಸಿಕೊಳ್ಳಲೆಂದು ಕುಪ್ಪಡಿ ಇಡಲಾಗಿತ್ತು. ಈ ವೇಳೆ ಅಲ್ಲೇ ಆಟವಾಡುತ್ತಿದ್ದ ಮಗು ಥಿನ್ನರ್ ಬಾಟಲಿಯನ್ನು ಕೆಳಗೆ ಬೀಳಿಸಿದ್ದಾನೆ.
ಈ ವೇಳೆ ಥಿನ್ನರ್‌ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಾಲಕನ ದೇಹ ಸುಟ್ಟು ಹೋಗಿದೆ. ಇದೇ ವೇಳೆ ಮಗನನ್ನು ಕಾಪಾಡಲು ಹೋಗಿದ್ದ ಚಂದ್ರಕಾಂತ್ ಅವರಿಗೂ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಕೂಡಲೆ ಮನೆಯವರು ತಂದೆ, ಮಗನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಅಷ್ಟರಲ್ಲಾಗಲೇ ಬಾಲಕ ಅಗಸ್ತ್ಯ ಮೃತಪಟ್ಟಿದ್ದ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಕಾಂತ್ ಅವರೂ ಕೂಡ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೀಗ ತಂದೆ, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.