ಬೆಂಗಳೂರು: ಸಹಕಾರಿ ಸಂಘಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗಳಿಗೆ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2025ಗೆ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರಕಿದೆ.
ಮುಖ್ಯಮಂತ್ರಿ ಪರ ವಿಧೇಯಕ ಮಂಡಿಸಿದ ಎಚ್.ಕೆ.ಪಾಟೀಲ್ ಅವರು, ಸಹಕಾರ ಸಂಘಗಳಲ್ಲಿ ಸಾಮಾಜಿಕ ನ್ಯಾಯ ಅನುಷ್ಠಾನಗೊಳಿಸಲು ಎಸ್ಸಿ/ಎಸ್ಟಿ, ಮಹಿಳೆ ಸೇರಿ ಮೂವರನ್ನು ನಾಮ ನಿರ್ದೇಶನಗೊಳಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಆದರೆ, ಈ ನಾಮನಿರ್ದೇಶಿತ ಸದಸ್ಯರಿಗೆ ಈ ಹಿಂದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮತದಾನದ ಹಕ್ಕು ನೀಡಲಾಗಿತ್ತು. ಆದರೆ, ರಾಜ್ಯಪಾಲರ ಸಲಹೆ ಮೇರೆಗೆ ಆ ಅಂಶವನ್ನು ತೆಗೆದು ಕೇವಲ ನಾಮನಿರ್ದೇಶನಕ್ಕಷ್ಟೇ ಸಿಮಿತಗೊಳಿಸಿ, ಚುನಾವಣಾ ಪ್ರಕ್ರಿಯೆ ಪಾಲ್ಗೊಳ್ಳದಂತೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅದರ ಜೊತೆಗೆ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳದ, ಸಂಘದೊಂದಿಗೆ ವ್ಯವಹಾರ ಮಾಡದ ಸದಸ್ಯರಿಗೆ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವ ಅಂಶ ಈ ಹಿಂದಿನ ತಿದ್ದುಪಡಿಯಲ್ಲಿ ಸೇರಿಸಲಾಗಿತ್ತು. ಅದನ್ನು ಈ ತಿದ್ದುಪಡಿಯಲ್ಲಿ ತೆಗೆಯಲಾಗಿದೆ ಎಂದು ಮಾಹಿ ನೀಡಿದರು,
ಸರ್ಕಾರದಿಂದ ನೆರವು ಪಡೆಯುವ ಸಹಕಾರ ಸಂಘಗಳನ್ನು ನೆರವು ಪಡೆದ ಸಹಕಾರ ಸಂಘ ಎಂದು ಗುರುತಿಸುವ ಅಂಶಗಳನ್ನು ಸೇರಿಸಲಾಗಿದೆ. ಹಾಗೆಯೇ, ಸಹಕಾರ ಸಂಘದ ನಿರ್ದೇಶಕರು ಪ್ರತಿ ವರ್ಷ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂಬ ಅಂಶವನ್ನು ಸೇರಿಸಲಾಗಿದೆ ಎಂದರು.
ಈ ವೇಳೆ ವಿಧೇಯಕ ದಲ್ಲಿನ ತಿದ್ದುಪಡಿ ಅಂಶಗಳಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಆರಗ ಜ್ಞಾನೇಂದ್ರ, ಚುನಾವಣೆಯಲ್ಲಿ ಎಸ್‌ಸಿ, ಎಸ್‌ಟಿ, ಬಿಸಿಎಂ(ಎ) ಮತ್ತು ಬಿಸಿಎಂ(ಬಿ) ಅಭ್ಯರ್ಥಿಗಳಿಗೆ ಮೀಸಲಾತಿ ಇರುವುದರಿಂದ ನಾಮನಿರ್ದೇಶನಗಳ ಬದಲಿಗೆ ಆಯಾ ಸಮುದಾಯಗಳ ಮೂವರನ್ನು ಆಯ್ಕೆ ಮಾಡಬಹುದು ಎಂದು ಸಲಹೆ ನೀಡಿದರು.
ಜೆಡಿಎಸ್‌ನ ಜಿ.ಟಿ. ದೇವೇಗೌಡ ಅವರು ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕರಾಗಿದ್ದರೂ, ಒಬಿಸಿಗಳಿಗೆ ನಾಮನಿರ್ದೇಶನವಿಲ್ಲದಂತಾಗಿದೆ ಎಂದು ಹೇಳಿದರು.
ಸಹಕಾರ ಸಂಘಗಳ ನಿರ್ದೇಶಕರ ಹುದ್ದೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಮೀಸಲಾತಿ ಅಡಿ ನಾಮನಿರ್ದೇಶನ ಮಾಡುವ ಕ್ರಮ ಸರಿಯಲ್ಲ. ಇದರಿಂದ ಸಹಕಾರ ಸಂಘಗಳನ್ನು ಮುಚ್ಚುವ ಸ್ಥಿತಿ ಬರುತ್ತದೆ’ ಎಂದರು.
ಇದೇ ವೇಳೆ ಇತರೆ ನಾಯಕರು ಸಹಕಾರ ಸಂಘದ ನಿರ್ದೇಶಕರು ಪ್ರತಿ ವರ್ಷ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂಬ ಅಂಶವನ್ನು ವಿರೋಧಿಸಿದರು. ಸಹಕಾರಿ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಮತ್ತಷ್ಟು ಹೆಚ್ಚಿಸುವುದು ಈ ಮಸೂದೆಯ ಗುರಿಯಾಗಿದೆ ಎಂದು ಹೇಳಿದರು.
ಈ ನಡುವೆ ಜಿ.ಟಿ.ದೇವೇಗೌಡ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಿವರಾಜ ತಂಗಡಗಿ ಅವರು, ‘ಜಿ.ಟಿ.ದೇವೇಗೌಡ ಅವರ ಮಾತುಗಳು ಸಹ್ಯವಲ್ಲ. ಈ ಮಾತು ಸ್ವಲ್ಪವೂ ಸರಿಯಿಲ್ಲ. ದಲಿತರಿಗೆ ಅವಕಾಶ ಸಿಗುವುದು ಬೇಡವೇ? ಈ ಮಸೂದೆಯಲ್ಲಿ ಸಮಸ್ಯೆಗಳು ಇದ್ದರೆ ಅದನ್ನು ತಿಳಿಸಿ. ಬದಲಿಗೆ ದಲಿತರನ್ನು ಸಹಕಾರ ಸಂಘಗಳಿಗೆ ನೇಮಕ ಮಾಡುವುದರಿಂದ, ಅವುಗಳನ್ನು ಮುಚ್ಚುವ ಸ್ಥಿತಿ ಬರುತ್ತದೆ ಎಂಬಂತಹ ಮಾತುಗಳನ್ನು ಆಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.