ಬೆಂಗಳೂರು: ಧರ್ಮಸ್ಥಳ ಪ್ರಕರಣ ಕುರಿತು ದೇಶ ಹಾಗೂ ನಾಡಿನಾದ್ಯಂತ ತೀವ್ರ ಚರ್ಚೆಯಾಗುತ್ತಿರುವಂತೆಯೇ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಹಕಾರ ಸಚಿವ ಕೆ. ಎನ್, ರಾಜಣ್ಣ ಭಾನುವಾರ ತಮ್ಮದೇ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ದೇವಸ್ಥಾನ ವ್ಯಾಪ್ತಿಯಲ್ಲಿ ಶವ ಹೂತಿದ್ದೇನೆ ಎಂದು ದೂರು ನೀಡಲು ಬಂದ ವ್ಯಕ್ತಿಯು ತಂದಿದ್ದ ಬುರುಡೆಯ ಪೂರ್ವಾಪರಗಳನ್ನು ವಿಚಾರಿಸದೆ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿಯಲ್ಲಿ ಹೂತ ನಂತರ ಮೃತದೇಹವನ್ನು ಹೊರತೆಗೆಯಲು ಕಾನೂನಿನಲ್ಲಿ ನಿರ್ದಿಷ್ಟ ನಿಯಮಗಳಿವೆ. ತಾಲ್ಲೂಕು ಮ್ಯಾಜಿಸ್ಟ್ರೇಟ್ ಅವರ ಅನುಮತಿ ಮತ್ತು ಉಪಸ್ಥಿತಿಯಲ್ಲಿ ಮಾತ್ರ ದೇಹವನ್ನು ಹೊರತೆಗೆಯಬೇಕು, ಇದನ್ನು 'ಎಕ್ಸ್ಯೂಮ್' (Exhume) ಎನ್ನಲಾಗುತ್ತದೆ ಎಂದು ತಿಳಿಸಿದರು.
ಆದರೆ, ಈ ಪ್ರಕರಣದಲ್ಲಿ ತಲೆಬುರುಡೆಯನ್ನು ಕಾನೂನುಬಾಹಿರವಾಗಿ ತರಲಾಗಿದ್ದು, ಇದನ್ನು ಎಲ್ಲಿಂದ, ಹೇಗೆ ಮತ್ತು ಯಾರ ಆದೇಶದ ಮೇರೆಗೆ ತೆಗೆಯಲಾಗಿದೆ ಎಂಬುದನ್ನು ಮೊದಲು ತನಿಖೆ ಮಾಡಬೇಕು ಎಂದು ರಾಜಣ್ಣ ಒತ್ತಾಯಿಸಿದ್ದಾರೆ. ಇದು ಕೇವಲ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಸಂಚು ಎಂದು ಅವರು ಆರೋಪಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ, ಬಿಜೆಪಿ ಕೂಡಾ ಇದನ್ನೇ ಆರಂಭದಿಂದಲೂ ಪ್ರಶ್ನಿಸಿತ್ತು. ಹೂತು ಹಾಕಿದ್ದ ಶವದ ಬುರುಡೆ ಈ ಷಡ್ಯಂತ್ರಕಾರರಿಗೆ ಸಿಕ್ಕಿದ್ದೆಲ್ಲಿ ಎನ್ನುವುದನ್ನು ಪತ್ತೆಹಚ್ಚಲು ಸರ್ಕಾರ ನಿರ್ದೇಶನ ನೀಡಬೇಕಿತ್ತು, ಆದರೆ ಸರ್ಕಾರ ನಗರ ನಕ್ಸಲರ ತಾಳಕ್ಕೆ ತಕ್ಕಂತೆ ಕುಣಿದಿದ್ದು ದುರಂತವೇ ಸರಿ ಎಂದು ಟೀಕಿಸಿದೆ.