ಬೆಂಗಳೂರು: ಗೌರಿ ಹಬ್ಬ, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹೂವು ಹಾಗೂ ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಹಬ್ಬಕ್ಕಾಗಿ ಪೂಜಾ ಸಾಮಗ್ರಿ, ಹೂ-ಹಣ್ಣುಗಳ ಖರೀದಿಗೆ ಭಾನುವಾರ ಜನ ಮುಗಿ ಬಿದ್ದಿದ್ದರು.
ಮಂಗಳವಾರದ ಗೌರಿ ಹಬ್ಬ, ಬುಧವಾರದ ಗಣೇಶ ಚತುರ್ಥಿ ಹಬ್ಬಗಳ ಪ್ರಯುಕ್ತ ನಗರದಲ್ಲೆಡೆ ಖರಿದೀ ಭರಾಟೆ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆ.ಆರ್. ಮಾರುಕಟ್ಟೆ, ಚಿಕ್ಕಪೇಟೆ, ಅವೆನ್ಯೂ ರಸ್ತೆಗಳಲ್ಲಿ ಖರೀದಿಗಾಗಿ ಜನರು ಭಾನುವಾರ ಮುಗಿಬಿದ್ದಿದ್ದರು. ಜೊತೆಗೆ ಮಲ್ಲೇಶ್ವರ, ಗಾಂಧೀ ಬಜಾರ್, ಯಶವಂತಪುರ ಮಾರುಕಟ್ಟೆಗಳಲ್ಲೂ ವ್ಯಾಪಾರ ಜೋರಾಗಿತ್ತು,
ಹಬ್ಬದ ದಿನ ಹೂ-ಹಣ್ಣುಗಳ ದರ ಮತ್ತಷ್ಟು ಏರಿಕೆ ಆಗುವುದರಿಂದ ಹಾಗೂ ಇತರೆ ಕಾರ್ಯಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು. ಇಡೀ ದಿನ ಕಿಕ್ಕಿರಿದು ಜನ ತುಂಬಿದ್ದರು.
ಈ ನಡುವೆ ಬೇಡಿಕೆ ಹೆಚ್ಚಾದಂತೆ ಹೂವು ಹಾಗೂ ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿದೆ. ಭಾನುವಾರ ಪ್ರತಿ ಕೆಜಿ ಮಲ್ಲಿಗೆ 3,800 ರೂ. ಮತ್ತು ಕೇವಲ 10 ಗ್ರಾಂಗೆ 40 ರೂ. ಮಾರಾಟ ಮಾಡಲಾಗಿದೆ.
ಕೆಆರ್ ಮಾರುಕಟ್ಟೆ ಸೇರಿದಂತೆ ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ 120–150 ರೂ.ಗೆ ಮಾರಾಟವಾಗುತ್ತಿದ್ದ ಗುಲಾಬಿಗಳು ಬಸವನಗುಡಿ ಮತ್ತು ಜಯನಗರದಾದ್ಯಂತದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪ್ರತಿ ಕೆಜಿಗೆ 400 ರೂ. ವರೆಗೆ ಮಾರಾಟವಾಗುತ್ತಿದ್ದವು.
ವರಮಹಾಲಕ್ಷ್ಮಿ ಅಥವಾ ದಸರಾಕ್ಕೆ ಹೋಲಿಸಿದರೆ ಈ ಬೆಲೆಗಳು ಕಡಿಮೆಯಾಗಿದೆ. ಆದರೆ, ಗ್ರಾಹಕರಿಗೆ ಈ ಬೆಲೆ ಹೆಚ್ಚು ಎನಿಸುತ್ತಿರುವುದು ನಿಜ ಎಂದು ಹೂವಿನ ವ್ಯಾಪಾರಿಗಳ ಸಂಘದ ಸದಸ್ಯ ಮಂಜುನಾಥ್ ಅವರು ಹೇಳಿದ್ದಾರೆ.
ಕೇವಲ ಹೂವುಗಳಷ್ಟೇ ಅಲ್ಲದೆ, ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಏಲಕ್ಕಿ ಬಾಳೆಹಣ್ಣು ಕೆಜಿಗೆ 160 ರೂ., ಕಿತ್ತಳೆ 200 ರೂ. ಮತ್ತು ಸೇಬು 240-260 ರೂ.ಗೆ ಮಾರಾಟವಾಗುತ್ತಿದ್ದು, ಕನಿಷ್ಠ 30–40 ರೂ. ಬೆಲೆ ಹೆಚ್ಚಾಗಿದೆ. ಪೂಜೆಗೆ ಅಗತ್ಯವಾದ ತೆಂಗಿನಕಾಯಿ ಮತ್ತು ಇತರ ಬಾಳೆಹಣ್ಣಿನದರ ಕೂಡ ಕನಿಷ್ಠ 40 ರೂ.ಗಳಷ್ಟು ದುಬಾರಿಯಾಗಿವೆ.
ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಸರಕು ಪೂರೈಕೆ ಕಡಿಮೆಯಾಗಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಕೆಆರ್ ಮಾರುಕಟ್ಟೆ ಮತ್ತು ಮಲ್ಲೇಶ್ವರಂನ ಮಾರಾಟಗಾರರು ಆರೋಪಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿದಿನ ಹೂವುಗಳ ಟ್ರಕ್ ಲೋಡ್‌ಗಳು ಬರುತ್ತವೆ, ಆದರೆ, ಕಳೆದ ಕೆಲವು ವಾರಗಳಿಂದ ಬೆಂಗಳೂರಿಗೆ ಸಣ್ಣ ಪ್ರಮಾಣದಲ್ಲಿ ಹೂವುಗಳ ಪೂರೈಕೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗದಿದ್ದರೆ ಅದು ದರ ಏರಿಕೆಗೆ ಕಾರಣವಾಗುತ್ತದೆ ಎಂದು ಕೆಆರ್ ಮಾರುಕಟ್ಟೆಯ ಸಗಟು ವ್ಯಾಪಾರಿ ಮುತ್ತು ಎಂ ಎಂಬುವವರು ಹೇಳಿದ್ದಾರೆ.
ಹಣ್ಣಿನ ಬೆಲೆಗಳ ಏರಿಕೆಯು ಸಾರಿಗೆ ಅಡಚಣೆ ಮತ್ತು ಮಂಡಿಗಳಲ್ಲಿನ ಖರೀದಿ ವೆಚ್ಚಗಳಿಗೆ ಸಂಬಂಧಿಸಿದ್ದಾಗಿದೆ. ಈ ಬೆಲೆ ಏರಿಕೆಯನ್ನು ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೇಲೆ ಹೇರುತ್ತಾರೆಂದು ಮಾರಾಟಗಾರರು ಹೇಳಿದ್ದಾರೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಖರೀದಿಯನ್ನು ಮಿತಿಗೊಳಿಸುತ್ತಿದ್ದೇವೆ. ಆ್ಯಪ್ ಮೂಲಕ ಆನ್'ಲೈನ್ ಬೆಲೆ ಹೋಲಿಕೆ ಮಾಡಿ ಖರೀದಿಸುತ್ತಿದ್ದೇವೆಂದು ಮಾರಾಟಕ್ಕೆ ಬಂದಿದ್ದ ಕುಟುಂಬವೊಂದು ಹೇಳಿದ್ದಾರೆ.