ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆ ಮತ್ತೊಂದು ಮಹಾ ಎಡವಟ್ಟು ಮಾಡಿಕೊಂಡಿದೆ. ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕನಿಗೆ ಆಪರೇಷನ್ ವೇಳೆ ಕರುಳನ್ನೇ ಕತ್ತರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಹೇಶ್ ಮಾದರ್ ಎಂಬ ಯುವಕ ಜೂನ್ 20ರಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಹೊಟ್ಟೆ ನೋವೆಂದು ದಾಖಲಾಗಿದ್ದರು. ಅಂದೇ ವೈದ್ಯರು ಯುವಕನಿಗೆ ಆಪರೇಷನ್ ಮಾಡಿದ್ದರು.
ಆದರೆ, ಆಪರೇಷನ್ ವೇಳೆ ಹೊಟ್ಟೆಯಲ್ಲಿದ್ದ ಗಂಟನ್ನು ಹೊರತೆಗೆಯುವ ಬದಲು ಕರುಳನ್ನು ಕಟ್ ಮಾಡಿ ಹೊರತೆಗೆದು ಹೊಲಿಗೆ ಹಾಕಿದ್ದಾರೆ. ಬಳಿಕ ಯುವಕನನ್ನು ಮನೆಗೆ ಕಳುಹಿಸಿದ್ದಾರೆ.
ಮನೆಗೆ ಹೋದ ಯುವಕನಿಗೆ ಮತ್ತಷ್ಟು ಹೊಟ್ಟೆ ನೋವು ಶುರುವಾಗಿದೆ. ಬಳಿಕ ಯುವಕ ಮತ್ತೆ ಬಿಮ್ಸ್'ಗೆ ದಾಖಲಾಗದೆ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಕರುಳನ್ನು ಕತ್ತರಿಸಿರುವುದು ಕಂಡು ಬಂದಿದೆ. ಪ್ರಸ್ತುತ ಯುವಕ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದುಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆ ಮತ್ತು ನಂತರದ ಚಿಕಿತ್ಸೆಗಾಗಿ ಈಗಾಗಲೇ ಸುಮಾರು 10 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ನಿರ್ಲಕ್ಷ್ಯಕ್ಕೆ ಕಾರಣರಾದ ಬಿಐಎಂಎಸ್ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆದಾಗ್ಯೂ, ಬಿಮ್ಸ್ ಉನ್ನತ ಮೂಲಗಳು ಘಟನೆ ಕುರಿತು ತದ್ವಿರುದ್ಧ ಹೇಳಿಕೆಯನ್ನು ನೀಡಿದೆ. ಮಹೇಶ್ ಮಾದರ್ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿ, ಮೂರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಆದರೆ, ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿಲ್ಲ ಎಂದು ತಿಳಿಸಿವೆ.