ಬೆಂಗಳೂರು: ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಬಿಜೆಪಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವುದಕ್ಕೆ ಸಚಿವ ಮಹದೇವಪ್ಪ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜ್ಯ ಉತ್ಸವ, ನಾಡ ಹಬ್ಬ, ಧಾರ್ಮಿಕ ಕಾರ್ಯಕ್ರಮವಲ್ಲ ಎಂದು ಹೇಳಿದ್ದಾರೆ.
ಧಾರ್ಮಿಕ ವಿಷಯಗಳ ಕುರಿತು ಚರ್ಚೆ ರಾಜಕೀಯ ಪಕ್ಷಗಳ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅದು ಜನರ ಆಯ್ಕೆಗೆ ಬಿಟ್ಟದ್ದು. ಬಾನು ಮುಷ್ತಾಕ್ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಭಾರತ, ಕರ್ನಾಟಕ ಮತ್ತು ಕನ್ನಡವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನೀವು ಅವರನ್ನು ಭಾರತದ ಪ್ರಜೆಯಾಗಿ ನೋಡಲು ಬಯಸುತ್ತೀರಾ ಅಥವಾ ನೀವು ಪ್ರತ್ಯೇಕತೆಯನ್ನು ಬಯಸುತ್ತೀರಾ? "ದಸರಾ ಒಂದು ನಾಡ ಹಬ್ಬ, ಎಲ್ಲರೂ ಭಾಗವಹಿಸುವ ರಾಜ್ಯದ ಉತ್ಸವ. ಇಲ್ಲಿ ಧರ್ಮ ಅಥವಾ ದೇವರ ಪ್ರಶ್ನೆ ಎಲ್ಲಿದೆ? ಎಂದು ಪ್ರಶ್ನಿಸಿದರು.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿಯೂ ಪೋಸ್ಟ್ ಮಾಡಿರುವ ಅವರು, ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಸರಾ ಉದ್ಘಾಟನೆಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಮತ್ತು ಹಲವು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದರ ಬಗ್ಗೆ ಬಿಜೆಪಿಗರು ಆಕ್ಷೇಪ ವ್ಯಕ್ತಪಡಿಸಿರುವುದು ಅತ್ಯಂತ ಬೇಸರದ ಸಂಗತಿ.
ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ನಾಡಿನ ಕಂಪನ್ನು ವಿಶ್ವದೆಲ್ಲೆಡೆ ಹಬ್ಬುವ ಕೆಲಸ ಮಾಡಿರುವ ಬಾನು ಮುಷ್ತಾಕ್ ಅವರನ್ನು ಈ ನಾಡಿನ ಪ್ರಜೆಗಳಾಗಿ ಬಿಜೆಪಿಗರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಗೌರವಿಸಬೇಕಿತ್ತು. ಆದರೆ, ತಲೆಯಲ್ಲಿ ಮನುವಾದಿಗಳ ವಿಷ ತುಂಬಿಕೊಂಡಿರುವ ಬಿಜೆಪಿಗರು ಮುಸ್ಲೀಮರ ಹೆಸರು ಕಂಡರೆ ಸಾಕು, ಅವರನ್ನು ಕಾರಣವಿಲ್ಲದೆಯೇ ದ್ವೇಷ ಮಾಡುವ ತಮ್ಮ ಕೆಟ್ಟ ನೀತಿಯನ್ನು ಮುಂದುವರೆಸಿದ್ದಾರೆ.
ದಸರಾ ಎಂಬುದು ನಾಡಹಬ್ಬ ಎಂಬ ಸಣ್ಣ ಸಂಗತಿಯನ್ನು ಮರೆತು, ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿರುವ ಬಿಜೆಪಿಗರು ನಾಡು ನುಡಿಗೆ ಕೊಡುಗೆ ನೀಡಿದವರನ್ನು ಅವಮಾನಿಸುವ ಕೆಲಸವನ್ನು ಮೊದಲು ನಿಲ್ಲಿಸಲಿ. ಧರ್ಮವನ್ನು ರಾಜಕೀಯದಲ್ಲಿ ಬೆರೆಸಬಾರದೆಂಬ ಸಣ್ಣ ಅರಿವನ್ನು ಬಿಜೆಪಿಯೊಳಗೆ ಅಳಿದುಳಿದಿರುವ ಕೆಲವರಾದರೂ ವಿಚಾರವಂತರು ತಮ್ಮ ಪಕ್ಷದ ಮುಖಂಡರಿಗೆ ತಿಳಿಸಲಿ.
ಭಾರತೀಯ ಜನಗಳಾದ ನಾವು ಐಕ್ಯತೆಯಿಂದ ಇರಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಬಿಜೆಪಿಗರು ತಮ್ಮ ಈ ಮುಸ್ಲಿಂ ದ್ವೇಷದ ಮನಸ್ಥಿತಿಯನ್ನು ಬದಿಗಿಟ್ಟು ಸಂವಿಧಾನದ ಆಶಯವನ್ನು ಅರ್ಥ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.