ಬೆಳ್ತಂಗಡಿ: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಸಾಕ್ಷಿದಾರನಾಗಿ ಬಂದು ಈಗ ಎಸ್ ಐಟಿ ಬಂಧನದಲ್ಲಿರುವ ಸಿ ಎನ್ ಚಿನ್ನಯ್ಯ ತಾನು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಆಶ್ರಯ ಪಡೆದಿದ್ದೆ ಎಂದು ಹೇಳಿಕೆ ನೀಡಿದ್ದು, ಅದರಂತೆ ಎಸ್.ಐ.ಟಿ ಅಧಿಕಾರಿಗಳ ತಂಡವು ಇಂದು ಬೆಳಗ್ಗೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ತಿಮರೋಡಿ ಮತ್ತು ಅವರ ಸಹೋದರನ ಮನೆಗೆ ತೆರಳಿದ್ದಾರೆ.
ತಿಮರೋಡಿಯವರ ಬಳಿ ಇರುವ ಮೊಬೈಲ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇದೆ ಎಂದು ಚಿನ್ನಯ್ಯ ಹೇಳಿದ್ದು ಈ ಸಂಬಂಧ ಮನೆಯಿಡೀ ಎಸ್ ಐಟಿ ತಂಡ ಶೋಧ ನಡೆಸುತ್ತಿದೆ. ಬೆಳ್ತಂಗಡಿ ನ್ಯಾಯಾಧೀಶರಿಂದ ಸರ್ಚ್ ವಾರೆಂಟ್ ಪಡೆದುಕೊಂಡಿರುವ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಜೊತೆಯಲ್ಲಿ ಕರೆದುಕೊಂಡು ಬೆಳ್ತಂಗಡಿಯ ಉಜಿರೆಯಲ್ಲಿರುವ ತಿಮರೋಡಿ ಮನೆಗೆ ತೆರಳಿದ್ದು, ಮಹಜರು ನಡೆಸುತ್ತಿದ್ದಾರೆ.
ಎಸ್‌ಐಟಿ ಉತ್ಕನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಮೊಬೈಲ್ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ಹೇಳಿದ್ದ.
ಈ ಕಾರಣಕ್ಕೆ ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಮತ್ತು ಮೊಬೈಲ್ ಸಂಗ್ರಹಿಸಲು ಪೊಲೀಸರು ತಿಮರೋಡಿ ನಿವಾಸಕ್ಕೆ ಆಗಮಿಸಿದ್ದಾರೆ. ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಆರೋಪಿಗೆ ಉಜಿರೆಯ ನಿವಾಸದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಕಳೆದ ಎರಡು ತಿಂಗಳಿಂದ ಅಶ್ರಯ ನೀಡಿದ್ದರಿಂದ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಈ ದಾಳಿ ನಡೆಯುತ್ತಿದೆ ಎನ್ನಲಾಗಿದೆ.