ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೀತೆ ಹಾಡಿದ್ದು ತಪ್ಪು. ಆದರೆ, ಕ್ಷಮೆ ಕೇಳಿರುವುದರಿಂದ ಎಲ್ಲವೂ ಮುಗಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಹಾಗೆ ಹೇಳಬಾರದಿತ್ತು ಹೇಳಿದ್ದಾರೆ. ಆರ್‌ಎಸ್‌ಎಸ್ ಗೀತೆ ಹೇಳಿದೆ ಮೇಲೆ ಅವರು ಕ್ಷಮೆ ಕೇಳಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಕ್ಷಮೆ ಕೇಳಿದ ಮೇಲೆ ಮುಗೀತು. ಪದೇ ಪದೇ ಅದನ್ನ ಎತ್ತಿ ಹಿಡಿಯೋದು ಬೇಡ. ಇದೀಗ ಅದು ಮುಗಿದ ಅಧ್ಯಾಯ. ಮತ್ತೆ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಮುಂದೆ ಯಾರೂ ಹೀಗೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಆರ್‌ಎಸ್‌ಎಸ್‌ನ ಗೀತೆಯ ಕೆಲವು ಸಾಲುಗಳನ್ನು ಹಾಡಿದ್ದರು. ಇದು ಬಿಜೆಪಿಯನ್ನು ಕೆಣಕುವ ಉದ್ದೇಶದಿಂದ ಮಾಡಿದ ತಮಾಷೆಯ ಕೃತ್ಯವಾಗಿತ್ತು ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಘಟನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲವನ್ನುಂಟುಮಾಡಿತು.
ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಶಿವಕುಮಾರ್‌ರ ಈ ವರ್ತನೆಯನ್ನು ಕೆಲವರು ಟೀಕಿಸಿದರೆ, ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿತು. ಈ ಹಿನ್ನೆಲೆಯಲ್ಲಿ, ಡಿಕೆಶಿ ಆಗಸ್ಟ್ 26 ರಂದು ಕ್ಷಮೆಯಾಚಿಸಿ, ತಾನು ಯಾರ ಭಾವನೆಗಳಿಗೂ ಧಕ್ಕೆ ತಾರದ ಉದ್ದೇಶವಿಲ್ಲದಿದ್ದರೂ, ತನ್ನ ಕೃತ್ಯದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದರು