ರಾಮೇಶ್ವರಂ ಕೆಫೆ (ಸಂಗ್ರಹ ಚಿತ್ರ) 
ರಾಜ್ಯ

ಆಹಾರ ಸುರಕ್ಷತೆ, ಮಾನನಷ್ಟ ಆರೋಪ: ರಾಮೇಶ್ವರಂ ಕೆಫೆ ವಿರುದ್ಧ FIR ದಾಖಲು; ಕೋಲು ಕೊಟ್ಟು ಹೊಡೆಸಿಕೊಂಡ ಮಾಲೀಕರು?

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ಟರ್ಮಿನಲ್ 1 ರಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆಯ ಮಾಲೀಕರು ಮತ್ತು ಪ್ರತಿನಿಧಿಯ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನನಷ್ಟ ಆರೋಪದ ಮೇಲೆ ರಾಮೇಶ್ವರಂ ಕೆಫೆ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ಟರ್ಮಿನಲ್ 1 ರಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆಯ ಮಾಲೀಕರು ಮತ್ತು ಪ್ರತಿನಿಧಿಯ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ಹಾನಿಕಾರಕ ಆಹಾರವನ್ನು ಮಾರಾಟ ಮಾಡುವುದು, ಸುಳ್ಳು ಮಾಹಿತಿ ನೀಡುವುದು, ಕ್ರಿಮಿನಲ್ ಪಿತೂರಿ ಮತ್ತು ಇತರ ಅಪರಾಧಗಳಿಗಾಗಿ ಬಿಲ್ಡರ್ ಒಬ್ಬರು ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ಕಾರ್ಯನಿರ್ವಾಹಕ ಸುಮಂತ್ ಲಕ್ಷ್ಮಿನಾರಾಯಣ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಬಿಎನ್‌ಎಸ್ ಸೆಕ್ಷನ್ 61, 123, 217, 228, 229, 274 ಮತ್ತು 275 ರ ನಿಬಂಧನೆಗಳ ಅಡಿಯಲ್ಲಿ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಸುಮಂತ್ ಬಿ. ಎಲ್. (ಎ 1), ದಿವ್ಯಾ ರಾಘವೇಂದ್ರ ರಾವ್ (ಎ 2) ಮತ್ತು ರಾಘವೇಂದ್ರ ರಾವ್ (ಎ 3) ಎಂಬ ಮೂವರು ಆರೋಪಿಗಳ ಹೆಸರಿದೆ ಎಂದು ಹೇಳಲಾಗಿದೆ.

ಅಂತೆಯೇ ಸೋಮವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಮೂವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಏನಿದು ಪ್ರಕರಣ?

ಜುಲೈ 24 ರಂದು ಕೆಫೆಯ ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ (ಟರ್ಮಿನಲ್ 1) ಹುಳವಿದ್ದ ಪೊಂಗಲ್ ಅನ್ನು ತನಗೆ ನೀಡಲಾಗಿತ್ತು ಎಂದು ಮಾರತ್‌ಹಳ್ಳಿ ನಿವಾಸಿ ನಿಖಿಲ್ ಎನ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ಜುಲೈ 24, 2025 ರಂದು, ಬೆಳಿಗ್ಗೆ 7:42 ರ ಸುಮಾರಿಗೆ, ನಿಖಿಲ್ ಗುವಾಹಟಿಗೆ ವಿಮಾನ ಹತ್ತುವ ಮೊದಲು ನಿಲ್ದಾಣದ ಆವರಣದಲ್ಲಿದ್ದ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದರು. ಪೊಂಗಲ್ ಮತ್ತು ಫಿಲ್ಟರ್ ಕಾಫಿಯನ್ನು ಆರ್ಡರ್ ಮಾಡಿದ ನಂತರ, ಅವರು ತಮ್ಮ ಆಹಾರದಲ್ಲಿ ಹುಳು ಬಿದ್ದಿರುವುದು ಅವರ ಕಣ್ಮಿಗೆ ಬಿದ್ದಿತ್ತು. ಈ ವೇಳೆ ಅವರು ಪ್ರಶ್ನಿಸಿದಾಗ ಸಿಬ್ಬಂದಿ ಬದಲಿ ಆಹಾರವನ್ನು ನೀಡಲು ಮುಂದಾದರು. ಆದರೆ ನಿಖಿಲ್ ಅದನ್ನು ನಿರಾಕರಿಸಿದರು.

ಅವರ ದೂರಿನ ಮೇರೆಗೆ, ಸಿಬ್ಬಂದಿ ಆಹಾರವನ್ನು ಬದಲಾಯಿಸಲು ಒಪ್ಪಿಕೊಂಡರು, ಆದರೆ ಅವರು ಗುವಾಹಟಿಗೆ ವಿಮಾನ ಹತ್ತುವ ಆತುರದಲ್ಲಿದ್ದ ಕಾರಣ ಅದನ್ನು ನಿರಾಕರಿಸಿದರು. ಇತರ ಗ್ರಾಹಕರು ಘಟನೆಯನ್ನು ಚಿತ್ರೀಕರಿಸಿ ಪೊಂಗಲ್‌ನಲ್ಲಿದ್ದ ಹುಳುವಿನ ಫೋಟೋ ತೆಗೆದಿದ್ದರು. ಆದರೆ ಮರುದಿನ, ಕೆಫೆಯ ಕಾರ್ಯಾಚರಣೆ ಮುಖ್ಯಸ್ಥ ಸುಮಂತ್, ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಗ್ರಾಹಕರ ಗುಂಪೊಂದು 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದೆ ಎಂದು ಆರೋಪಿಸಿ ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ ಪ್ರಕರಣ ದಾಖಲಿಸಿದರು.

ಈ ಸಂಬಂಧ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ ನಿಖಿಲ್ ಮತ್ತು ಅವನ ಸ್ನೇಹಿತರನ್ನು ವಿಚಾರಣೆಗೆ ಕರೆಸಿದರು. ನಿಖಿಲ್ ಬ್ಲ್ಯಾಕ್‌ಮೇಲ್ ಆರೋಪವನ್ನು ನಿರಾಕರಿಸಿದರು ಮತ್ತು ಕರೆ ದಾಖಲೆಗಳು ಮತ್ತು ಇತರ ಪುರಾವೆಗಳನ್ನು ಸಲ್ಲಿಸಿದರು. ನಂತರ ಪೊಲೀಸರು ನಿಖಿಲ್ ಮತ್ತು ಅವನ ಸ್ನೇಹಿತರು ಬಂಧಿತ ಶಂಕಿತನೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋಲು ಕೊಟ್ಟು ಹೊಡೆಸಿಕೊಂಡ ರಾಮೇಶ್ವರಂ ಕೆಫೆ ಮಾಲೀಕರು

ಇನ್ನು ನಿಖಿಲ್, ರಾಮೇಶ್ವರಂ ಕೆಫೆ ಆಡಳಿತ ಮಂಡಳಿಯು ಕ್ರಿಮಿನಲ್ ಬೆದರಿಕೆ ಮತ್ತು ತನ್ನ ಖ್ಯಾತಿಗೆ ಹಾನಿ ಮಾಡಿದೆ ಎಂದು ಆರೋಪಿಸಿ ಪ್ರತಿದೂರು ದಾಖಲಿಸಲು ನಿರ್ಧರಿಸಿದರು. ನಿಖಿಲ್ ಪರ ವಕೀಲ ಹುಸೇನ್ ಓವೈಸ್, ಪೊಲೀಸರು ತಮ್ಮ ಕಕ್ಷಿದಾರ ಮತ್ತು ಅವರ ನಾಲ್ವರು ಸ್ನೇಹಿತರಿಗೆ ಪದೇ ಪದೇ ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

"ನಿಖಿಲ್‌ಗೆ ಇದು ತುಂಬಾ ಮುಜುಗರದ ಸಂಗತಿಯಾಗಿತ್ತು. ಅವನು ಶ್ರೀಮಂತ ಕುಟುಂಬದಿಂದ ಬಂದವನು. ಅವನು ಯಾರನ್ನಾದರೂ ಸುಲಿಗೆ ಮಾಡುವ ಅಗತ್ಯ ಏಕೆ?" ಎಂದು ಓವೈಸ್ ಪ್ರಶ್ನೆ ಮಾಡಿದ್ದಾರೆ. ಪೊಲೀಸರು ತಕ್ಷಣ ಪ್ರಕರಣವನ್ನು ಕೈಗೆತ್ತಿಕೊಳ್ಳಲಿಲ್ಲ ಮತ್ತು ಕೇವಲ ನಾನ್-ಕಾಗ್ನಿಸಬಲ್ ರಿಪೋರ್ಟ್ (NCR) ಸಲ್ಲಿಸಿದ್ದಾರೆ ಎಂದು ವಕೀಲರು ಸೂಚಿಸಿದರು. ನಿಖಿಲ್ ಅವರ ವಕೀಲರು ನಂತರ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಕರಣವನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತರಿಗೆ (ಈಶಾನ್ಯ) ದೂರು ನೀಡಿದರು.

ಡಿಸಿಪಿ ಸೂಚನೆ ಮೇರೆಗೆ ಎಫ್ಐಆರ್

ಡಿಸಿಪಿ ಸೂಚನೆಗಳ ಮೇರೆಗೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿ ಹಾನಿಕಾರಕ ಆಹಾರ ಮಾರಾಟ, ಸುಳ್ಳು ಮಾಹಿತಿ ನೀಡುವಿಕೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಇತರ ಅಪರಾಧಗಳ ಅಡಿಯಲ್ಲಿ ಕೆಫೆ ಮಾಲೀಕರಾದ ರಾಘವೇಂದ್ರ ರಾವ್ ಮತ್ತು ಸುಮಂತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಕೀಲ ಒವೈಸ್, "ಇದು ನನ್ನ ಕಕ್ಷಿದಾರರಿಗಾದ ಕಿರುಕುಳ. ಅವರು ಅವರ ಖ್ಯಾತಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ. ಇದು ಕ್ರಿಮಿನಲ್ ಪಿತೂರಿಯ ಸ್ಪಷ್ಟ ಪ್ರಕರಣವಾಗಿದೆ" ಎಂದು ಹೇಳಿದ್ದಾರೆ. ಅಂತೆಯೇ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಎಲ್ಲರಿಗೂ ನೋಟಿಸ್ ನೀಡಲಾಗಿದೆ ಮತ್ತು ಅವರ ಹೇಳಿಕೆಗಳನ್ನು ದಾಖಲಿಸಿದ ನಂತರ ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದರು.

ನಿಖಿಲ್ ವಿರುದ್ಧದ ದೂರಿನ ತನಿಖೆ ನಡೆಸಿದ ವೈಯಾಲಿಕಾವಲ್ ಪೊಲೀಸ್ ಅಧಿಕಾರಿಯೊಬ್ಬರು, ಶಂಕಿತರು ವಾಟ್ಸಾಪ್ ಕರೆ ಮಾಡಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಸಿದ್ದರೂ, ನಿಖಿಲ್ ಮತ್ತು ಅವರ ಸ್ನೇಹಿತರು ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು.

ಸದ್ಯಕ್ಕೆ, ಎಫ್‌ಐಆರ್ ಮತ್ತು ಆರೋಪಗಳ ಕುರಿತು ರಾಮೇಶ್ವರಂ ಕೆಫೆಯಿಂದ ಅಧಿಕೃತ ಹೇಳಿಕೆ ಇನ್ನೂ ಬರಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Epstein ಕಡತಗಳಲ್ಲಿ ಪ್ರಧಾನಿ ಮೋದಿ ಉಲ್ಲೇಖ: ಭಾರತದ ಪ್ರತಿಕ್ರಿಯೆ ಏನು?

5th T20I: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 46 ರನ್ ಗೆಲುವು; 4-1 ಅಂತರದಲ್ಲಿ ಸರಣಿ ವಶ

ಮಹಾರಾಷ್ಟ್ರ ನೂತನ DCM ಸುನೇತ್ರಾ ಪವಾರ್‌ಗೆ ಕಂದಾಯ ಸೇರಿ ಮೂರು ಖಾತೆ ಹಂಚಿಕೆ; ಕೈತಪ್ಪಿದ ಹಣಕಾಸು

5th T20: 42 ಎಸೆತಗಳಲ್ಲಿ ಶತಕ ಬಾರಿಸಿದ ಇಶಾನ್ ಕಿಶಾನ್! 272 ರನ್ ಟಾರ್ಗೆಟ್ ನೀಡಿದ ಭಾರತ! Video

IND vs NZ 5th T20I: UAE ಆಟಗಾರನ 'ವಿಶ್ವದಾಖಲೆ' ಮುರಿದ ಸೂರ್ಯ ಕುಮಾರ್ ಯಾದವ್!

SCROLL FOR NEXT