ಬೆಂಗಳೂರು: ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ವಿಚಾರ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿರುವ ನಡುವೆಯೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ವರು ಸಿದ್ದರಾಮಯ್ಯ ಆಪ್ತರ ಬೆಂಬಲ ಗಳಿಸುವ ಪ್ರಯತ್ನ ಆರಂಭಿಸಿದ್ದಾರೆ.
ಈ ನಿಟ್ಟಿನಲ್ಲಿ ಅವರು ಅಧಿಕೃತ ಸಭೆ, ಸಮಾರಂಭಗಳನ್ನೇನೂ ಆಯೋಜಿಸದೆ ಹೋದರೂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರು, ಶಾಸಕರು, ಮುಖಂಡರು ಸಾಂದರ್ಭಿಕವಾಗಿ ಎದುರಾದ ಕಡೆ, ಸಭೆ-ಸಮಾರಂಭಗಳಲ್ಲೇ ಅವರ ಜೊತೆ ಚರ್ಚೆ ನಡೆಸಿ. ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆ, ಸಲಹೆ ಮೇರೆಗೆ ಡಿಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಹಾಗೂ ಅವರ ಆಪ್ತ ವಲಯದ ನಾಯಕರೊಂದಿಗಿರುವ ಭಿನ್ನಾಭಿಪ್ರಾಯಗಳನ್ನು ಮುರಿಯಲು ಯತ್ನ ನಡೆಸುತ್ತಿದ್ದಾರೆ. ಆದರೆ, ಸಿದ್ದು ಆಪ್ತರು ಅದಕ್ಕೆ ಆಸ್ಪದ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಲು, ಸಿದ್ದು ಆಪ್ತರು ವಿರೋಧ ವ್ಯಕ್ತಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆ ದೀರ್ಘವಾಗುವ ಸಾಧ್ಯತೆಯಿದ್ದು, ಸಿದ್ದು ಆಪ್ತರ ಮನವೊಲಿಸಿದರೆ, ಅಧಿಕಾರ ವರ್ಗಾವಣೆ ಸುಲಭವಾಗುತ್ತದೆ ಎಂಬ ಆಲೋಚನೆಯಲ್ಲಿ ಈ ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ.
ಏತನ್ಮಧ್ಯೆ ದೆಹಲಿಗೆ ಭೇಟಿ ನೀಡಿರುವ ಸಚಿವ ಶಿವಾನಂದ್ ಪಾಟೀಲ್ ಅವರು, ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದು, ಸಿಎಂ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಒತ್ತಾಯಿದ್ದಾರೆನ್ನಲಾಗಿದೆ. ಆದರಪೆ ಖರ್ಗೆ, ತಮ್ಮ ಪುತ್ರ ಹಾಗೂ ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಪ್ರಿಯಾಂಕ್ ಖರ್ಗೆಯವರು ಶುಕ್ರವಾರ ಡಿಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ.ಸುರೇಶ್ ಅವರನ್ನು ಭೇಟಿ ಮಾಡಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ, ಭೇಟಿ ವೇಳೆ ಇತ್ತೀಚೆಗೆ ತಾವು ದೆಹಲಿಗೆ ಭೇಟಿ ನೀಡಿ ರಾಹುಲ್ ಜೊತೆಗೆ ನಡೆಸಿದ ಮಾತುಕತಸ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಿಸಿರುವುದಾಗಿ ಹಾಗೂ ರಾಹುಲ್ ನೀಡಿರುವ ಸಂದೇಶವನ್ನು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ.
ಇದರ ಬೆನ್ನಲ್ಲೇ ಡಿಕೆ.ಶಿವಕುಮಾರ್ ಅವರು ವಿವಾಹ ಕಾರ್ಯಕ್ರಮವೊಂದರಲ್ಲಿ ಎದುರಾದಾಗ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ, ಕೆಲಕಾಲ ಮಾತುಕತೆ ನಡೆಸಿದ್ದಾರೆ. ಜೊತೆಗೆ ಸಚಿವ ಎಂಬಿ.ಪಾಟೀಲ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ದು ಆಪ್ತರೊಂದಿಗೆ ಡಿಕೆ.ಶಿವಕುಮಾರ್ ಅವರು ವಿಶ್ವಾಸ ಗಳಿಸುವ ಯತ್ನ ನಡೆಸುತ್ತಿದ್ದಾರೆಂಬ ಚರ್ಚೆಗಳು ಶುರುವಾಗಿದೆ.
ಈ ನಡುವೆ ಕೇರಳ ಸೇರಿದಂತೆ ಐದು ರಾಜ್ಯಗಳು 2026 ರಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆ ಹಿನ್ನೆಲೆ ಯಾವುದೇ ಬದಲಾವಣೆಗೂ ಮುಂದಾಗದೆ, ಕರ್ನಾಟಕದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ಅವರು ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ತಿಳಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಕೇರಳದಲ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸತೀಶ್ ಜಾರಕಿಹೊಳಿ ನನ್ನ ವೈರಿಯಲ್ಲ: ಡಿ.ಕೆ ಶಿವಕುಮಾರ್
ಇನ್ನು ಸತೀಶ್ ಜಾರಕಿಹೊಳಿ ಜೊತೆಗಿನ ಮಾತುಕತೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಸಚಿವ ಸತೀಶ್ ಜಾರಕಿಹೊಳಿ ಮತ್ತು ನಾವು ಸಹೋದ್ಯೋಗಿಗಳು, ನಾವು ಭೇಟಿ ಮಾಡಿದಾಗ ರಾಜ್ಯ ಮತ್ತು ಪಕ್ಷದ ವಿಚಾರ ಮಾತನಾಡಿದ್ದೇವೆ. ನಮ್ಮನ್ನು ವೈರಿಗಳಂತೆ ಏಕೆ ನೋಡುತ್ತೀರಿ? ನಾವು ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಜತೆಗೆ ಇರುತ್ತೇವೆ. ಬೆಳಗ್ಗೆ ತಿಂಡಿಗೆ, ರಾತ್ರಿ ಊಟಕ್ಕೆ ಸೇರುತ್ತೇವೆ. ರಾಜಕೀಯ ದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ತನ ಇದ್ದೇ ಇರುತ್ತದೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿಯವರು ಪ್ರತಿಕ್ರಿಯೆ ನೀಡಿ, ನಾನು ಮತ್ತು ಎಂ.ಬಿ.ಪಾಟೀಲ್ ಶುಕ್ರವಾರ ಸುಮಾರು ಒಂದು ಗಂಟೆ ಮಾತನಾಡಿದ್ದೇವೆ. ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವುದು, ಆಂಧ್ರಪ್ರದೇಶ ಮತ್ತು ತಮಿಳುನಾಡು ನಮಗೆ ಸ್ಪರ್ಧೆ ನೀಡುತ್ತಿರುವುದು, ತೆಲಂಗಾಣದಲ್ಲಿ ಸದ್ಯದಲ್ಲೇ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವ ಕುರಿತು ಚರ್ಚಿಸಿದ್ದೇವೆ. ರಾಜ್ಯದ ಪ್ರಗತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು. ಡಿಕೆಶಿ ಜತೆ ಚರ್ಚೆ ಆಕಸ್ಮಿಕವಷ್ಟೆ ಎಂದು ತಿಳಿಸಿದರು.