ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ, ರಾಜ್ಯದ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಯನ್ನು ಆರಂಭಿಸಿದ ಅಶೋಕ್, ಮೇ 8, 2020 ರಂದು ಸಿದ್ದರಾಮಯ್ಯ ಅವರು ಮಾಡಿದ ಟ್ವೀಟ್ ನ್ನು ಉಲ್ಲೇಖಿಸಿದರು - ಆಗ ಸಿಎಂ ವಿರೋಧ ಪಕ್ಷದ ನಾಯಕರಾಗಿದ್ದರು. ಅದರಲ್ಲಿ ಅವರು ರೈತರು ತಮ್ಮ ಬೆಳೆಗಳಿಗೆ ನಿಗದಿತ ಬೆಲೆಗಿಂತ ಕಡಿಮೆ ದರವನ್ನು ಪಡೆಯುತ್ತಿರುವ ಸಮಯದಲ್ಲಿ ಸರ್ಕಾರವು 5,000 ಕೋಟಿ ರೂಪಾಯಿ ನಿಧಿಯನ್ನು ರಚಿಸುವಂತೆ ಕರೆ ನೀಡಿದ್ದರು.
ಇದು ಕೇವಲ ಟ್ವೀಟ್ ಅಲ್ಲ. 2023 ರ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯು 5,000 ಕೋಟಿ ರೂಪಾಯಿಗಳ ಆರಂಭಿಕ ನಿಧಿಯೊಂದಿಗೆ ಶಾಶ್ವತ ವಿಪತ್ತು ನಿರ್ವಹಣಾ ನಿಧಿಯನ್ನು ರಚಿಸುವ ಭರವಸೆಯನ್ನು ಸಹ ಒಳಗೊಂಡಿದೆ. ಅದನ್ನು ಸರ್ಕಾರ ರಚಿಸಿದೆಯೇ, ಹಳೆಯ ಮೈಸೂರು ಪ್ರದೇಶಕ್ಕಿಂತ ಉತ್ತರ ಕರ್ನಾಟಕದಲ್ಲಿ ನಷ್ಟ ಹೆಚ್ಚಾಗಿದೆ. ನೀವು 5,000 ಕೋಟಿ ರೂಪಾಯಿ ಹಣ ರೈತರಿಗೆ ಏಕೆ ನೀಡಿಲ್ಲ ಎಂದು ಕೇಳಿದರು.
ಕಬ್ಬಿನ ಬೆಲೆ ನಿಗದಿಮಾಡಿದ್ದು ಕೇಂದ್ರ ಸರ್ಕಾರ ಎಂದ ಅಶೋಕ್, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕೆಂದು ಆದೇಶಿಸಿದೆ ಎಂದು ಸದನದಲ್ಲಿ ಗಮನಸೆಳೆದರು.
ಕಳೆದ ಎರಡೂವರೆ ವರ್ಷಗಳಲ್ಲಿ 2,422 ರೈತರ ಆತ್ಮಹತ್ಯೆ ರಾಜ್ಯದಲ್ಲಿ ಆಗಿದೆ. ಇವರಲ್ಲಿ 32 ಮಂದಿ ಕಬ್ಬು ಬೆಳೆಗಾರರಾಗಿದ್ದಾರೆ. ದೇಶದ ಒಟ್ಟು ಕಬ್ಬು ಬೆಳೆಗಾರರ ಆತ್ಮಹತ್ಯೆಯಲ್ಲಿ ಕರ್ನಾಟಕದಲ್ಲಿ ಶೇ. 22.5 ರಷ್ಟಿದ್ದರೆ, ತಮಿಳುನಾಡಿನಲ್ಲಿ ಈ ಸಂಖ್ಯೆ ಶೇ. 5.9 ಮತ್ತು ಆಂಧ್ರಪ್ರದೇಶದಲ್ಲಿ ಶೇ. 8 ರಷ್ಟಿದೆ. ಸರ್ಕಾರ ಇನ್ನೂ 5 ಗ್ಯಾರಂಟಿ ಯೋಜನೆ ಖಾತರಿ ಭ್ರಮೆಯಿಂದ ಹೊರಬಂದಿಲ್ಲ. ಖಾತರಿ ಯೋಜನೆಗಳು ರಾಜ್ಯದ ಬೊಕ್ಕಸವನ್ನು ಬರಿದು ಮಾಡುತ್ತಿದ್ದು, ಸರ್ಕಾರ ಬರ ಪರಿಹಾರವನ್ನು ಮುಂದೂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ತುಂಬಾ ಬುದ್ಧಿವಂತರು. ಅವರು ಬರ ಘೋಷಣೆಯನ್ನು ಎರಡು ತಿಂಗಳು ಮುಂದೂಡಿದರು ಎಂದು ಟೀಕಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಭೈರೇಗೌಡ, 2023 ರಲ್ಲಿ ಬರಗಾಲದಿಂದ ನಷ್ಟ ಅನುಭವಿಸಿದ 38 ಲಕ್ಷ ರೈತರಿಗೆ ಕಾಂಗ್ರೆಸ್ 4,300 ಕೋಟಿ ರೂ. ಪರಿಹಾರವನ್ನು ನೀಡಿದೆ ಎಂದರು. ಇದು ರಾಜ್ಯದ ಇತಿಹಾಸದಲ್ಲಿಯೇ ಪರಿಹಾರವಾಗಿ ನೀಡಲಾದ ಅತಿದೊಡ್ಡ ಮೊತ್ತವಾಗಿದೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ಸರ್ಕಾರವು ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ ಎಂದು ಬಿಜೆಪಿಗೆ ನೆನಪಿಸಿದ ಕೃಷ್ಣ ಬೈರೇಗೌಡ, ನಾವು ಬರಗಾಲ ಪರಿಹಾರವನ್ನು ಸಮಯಕ್ಕೆ ಸರಿಯಾಗಿ ಘೋಷಿಸಲಿಲ್ಲ ಎಂದು ಅವರು ಸುಪ್ರೀಂ ಕೋರ್ಟ್‌ಗೆ ಹೇಳಬೇಕಿತ್ತು. ರಾಜ್ಯ ಸರ್ಕಾರವು ಹಣ ನೀಡದ ಕಾರಣ ಅದರ ಬಾಗಿಲು ತಟ್ಟಿದ್ದು ಇದೇ ಮೊದಲು ಎಂದು ನಾವು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದೇವೆ. ನಾವು ಹೋರಾಡಿ, ಹಣವನ್ನು ಪಡೆದುಕೊಂಡು ರೈತರಿಗೆ ವಿತರಿಸಿದ್ದೇವೆ ಎಂದರು.
ಸಚಿವರ ಹೇಳಿಕೆಗಳು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಬಿಸಿ ವಾಗ್ವಾದಕ್ಕೆ ಕಾರಣವಾಯಿತು. ಇದರಿಂದ ಕಲಾಪ ಕೆಲ ಹೊತ್ತು ಮುಂದೂಡಲಾಯಿತು. ಅಧಿವೇಶನ ಪುನರಾರಂಭವಾದಾಗ, ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಅವರನ್ನು ಅಡ್ಡಿಪಡಿಸಬಾರದು. ಇತರರು ನಂತರ ಮಾತನಾಡಬೇಕು. ವಿರೋಧ ಪಕ್ಷಗಳು ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು, ಸತ್ಯಗಳ ಆಧಾರದ ಮೇಲೆ ಸರ್ಕಾರದ ಮೇಲೆ ಟೀಕೆ ಮಾಡಬೇಕು ಎಂದರು.