ಮಂಗಳೂರು: ಉದ್ಯೋಗ ಕ್ಷೇತ್ರದಲ್ಲಿ ದೇಶದ ಇತರೆ ರಾಜ್ಯಗಳ ಪೈಕಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದ್ದು, ಅತಿ ಕಡಿಮೆ ನಿರುದ್ಯೋಗ ದರ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ 'ಆವರ್ತಕ ಕಾರ್ಮಿಕ ಬಲ ಸಮೀಕ್ಷೆ' (PLFS - ಜುಲೈ-ಸೆಪ್ಟೆಂಬರ್ 2025) ವರದಿಯಲ್ಲಿ ಈ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ಲೋಕಸಭೆಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ.
ಜುಲೈ-ಸೆಪ್ಟೆಂಬರ್ 2025 ರ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLF ಗಳು) ಪ್ರಸ್ತುತ ಸಾಪ್ತಾಹಿಕ ಸ್ಥಿತಿಯಡಿಯಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಅಖಿಲ ಭಾರತ ನಿರುದ್ಯೋಗ ದರವನ್ನು ಶೇಕಡಾ 5.2 ಎಂದು ನಿಗದಿಪಡಿಸಿದೆ. ಅದರಂತೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಶೇ. 4.4ಕ್ಕೆ ಹೋಲಿಸಿದರೆ ನಗರಗಳು ಹೆಚ್ಚಿನ ಒತ್ತಡವನ್ನು (ಶೇ. 6.9) ಎದುರಿಸುತ್ತಲೇ ಇದೆ,
ಈ ಪೈಕಿ ಕರ್ನಾಟಕದ ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇಕಡಾ 2.5 ರಷ್ಟಿದ್ದರೆ, ನಗರದ ನಿರುದ್ಯೋಗ ಪ್ರಮಾಣ ಶೇ.3.3 ರಷ್ಟಿದೆ.
ರಾಜ್ಯವು ಶೇಕಡಾ 57.3 ರ ಕಾರ್ಮಿಕ ಬಲ ಭಾಗವಹಿಸುವಿಕೆಯ ದರ ಮತ್ತು ಶೇಕಡಾ 55.6 ರ ಕಾರ್ಮಿಕ ಜನಸಂಖ್ಯಾ ಅನುಪಾತವನ್ನು ಸಹ ದಾಖಲಿಸಿದೆ, ಇದು ಆರ್ಥಿಕ ಚಟುವಟಿಕೆಯಲ್ಲಿ ಬಲವಾದ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಗುಜರಾತ್ ಶೇ. 2.2 ರಷ್ಟು ಕಡಿಮೆ ನಿರುದ್ಯೋಗ ದರದೊಂದಿಗೆ ರಾಷ್ಟ್ರೀಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಗುಜರಾತ್ ಶೇ.2.2, ಕರ್ನಾಟಕ ಶೇ.2.8, ತಮಿಳುನಾಡು ಶೇ.5.7. ತೆಲಂಗಾಣ ಶೇ.5.7 ಕೇರಳ ಶೇ.8.0 ಮತ್ತು ಆಂಧ್ರಪ್ರದೇಶ ಶೇ.8.2 ನಿರುದ್ಯೋಗ ದರ ಹೊಂದಿದ್ದು, ಇದರೊಂದಿಗೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ.
ಕರ್ನಾಟಕದಲ್ಲಿ ಮಹಿಳಾ ಮತ್ತು ಪುರುಷ ನಿರುದ್ಯೋಗ ದರದಲ್ಲಿ ಅಲ್ಪ ವ್ಯತ್ಯಾಸವಿದ್ದು, ಪುರುಷರ ನಿರುದ್ಯೋಗ ದರ ಶೇ. 2.8 ಇದ್ದರೆ, ಮಹಿಳೆಯರಲ್ಲಿ ಇದು ಶೇ. 3.0 ರಷ್ಟಿದೆ. ಆದರೆ, ಕೇರಳದಂತಹ ರಾಜ್ಯಗಳಲ್ಲಿ ಈ ಅಂತರ ಹೆಚ್ಚಿದ್ದು, ಮಹಿಳೆಯರಲ್ಲಿ ಶೇ. 9.4 ರಷ್ಟು ನಿರುದ್ಯೋಗ ದರ ದಾಖಲಾಗಿದೆ.
ಇನ್ನು ಉತ್ತರ ಭಾರತದ ರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಅದರಲ್ಲೂ ನಗರ ಪ್ರದೇಶಗಳಲ್ಲಿ ಒತ್ತಡ ಹೆಚ್ಚಿದೆ. ರಾಜಸ್ಥಾನದಲ್ಲಿ ನಿರುದ್ಯೋಗ ದರ ಶೇ. 13.7 ಕ್ಕೆ ಏರಿದ್ದರೆ, ಉತ್ತರಾಖಂಡದಲ್ಲಿ ಒಟ್ಟಾರೆ ಶೇ. 8.9 ರಷ್ಟು ನಿರುದ್ಯೋಗವಿದೆ ಎಂದು ವರದಿ ತಿಳಿಸಿದೆ.
ಹರಿಯಾಣ ಮತ್ತು ಪಂಜಾಬ್ ಕ್ರಮವಾಗಿ ಶೇ. 6.2 ಮತ್ತು ಶೇ. 6.5 ರಷ್ಟು ನಿರುದ್ಯೋಗ ದರ ಇರುವುದು ವರದಿಯಾಗಿದೆ. ಉತ್ತರ ಪ್ರದೇಶ ಶೇ. 5.9 ರಷ್ಟಿದ್ದರೆ, ದೆಹಲಿದಲ್ಲಿ ಈ ದರವು ಶೇ. 6.6 ರಷ್ಟಿದೆ.
ಪಿಎಲ್‌ಎಫ್‌ಎಸ್ ಮೂಲಕ ಉದ್ಯೋಗ ಸೂಚಕಗಳನ್ನು ಅಂದಾಜಿಸಲಾಗಿದ್ದು, ದೇಶಾದ್ಯಂತ ಪ್ರಸ್ತುತ 6.02 ಕೋಟಿಗೂ ಹೆಚ್ಚು ಉದ್ಯೋಗಾಕಾಂಕ್ಷಿಗಳು 'ನ್ಯಾಷನಲ್ ಕೆರಿಯರ್ ಸರ್ವಿಸ್' (NCS) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆಂದು ಸರ್ಕಾರ ಮಾಹಿತಿ ನೀಡಿದೆ.