ಬೆಳಗಾವಿ: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಕೋರಿ ಹಲವು ನಿರ್ಣಯಗಳಿಗೆ ವಿಧಾನಸಭೆಯಲ್ಲಿ ಸರ್ವಾನುಮತದ ಮೂಲಕ ಅಂಗೀಕಾರ ನೀಡಲಾಯಿತು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ಗುರುವಾರದ ವಿಧಾನಸಭೆ ಕಲಾಪದಲ್ಲಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವ ಎಚ್.ಕೆ. ಪಾಟೀಲ್ ಅವರು ನಿರ್ಣಯಗಳನ್ನು ಮಂಡಿಸಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಬೆಂಗಳೂರು ನಗರ ಪ್ರದೇಶದಲ್ಲಿನ 73 ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆಗಳ ಪೈಕಿ 25 ಸಂಸ್ಥೆಗಳನ್ನು ಉತ್ತರ ಕರ್ನಾಟಕ್ಕೆ ಸ್ಥಳಾಂತರ ಮಾಡುವುದು, ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2 ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸುವುದು, ಮಹಾರಾಷ್ಟ್ರದ ವಿದರ್ಭ ಅಭಿವೃದ್ಧಿಗೆ ಮಂಡಳಿಗೆ ಕೇಂದ್ರ ಸರ್ಕಾರಪ್ರತಿವರ್ಷ ನೀಡುವ ಆರ್ಥಿಕ ನೆರವಿನ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ 5 ಸಾವಿರ ಕೋಟಿ ರು. ಆರ್ಥಿಕ ನೆರವು ನೀಡುವುದು,
ರಾಜ್ಯದಿಂದ ಹೆಚ್ಚಿನ ಎಥೆನಾಲ್ ಖರೀದಿಸುವುದು, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಮಂಜೂರಾತಿ ನೀಡುವುದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ.50 ರಿಂದಶೇ.56ರಷ್ಟು ಹೆಚ್ಚಿಸಿದ ಮೀಸಲಾತಿ ಪ್ರಮಾಣದ ಅಧಿಸೂಚನೆ ಮತ್ತು ಆದೇಶಗಳನ್ನು ಭಾರತ ಸಂವಿಧಾನ ಅನುಸೂಚಿ 9ಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯ ಮಂಡಿಸಿ ಅಂಗೀಕರಿಸಲಾಯಿತು. ಈ ನಿರ್ಣಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ವಿರೋಧ ಪಕ್ಷಗಳು ನಿರ್ಣಯಗಳನ್ನು ವಿರೋಧಿಸದಿದ್ದರೂ, ಕೇಂದ್ರ ಸರ್ಕಾರವು ತನ್ನ ವೈಫಲ್ಯದ ಹೊಣೆಯನ್ನು ಹೊರಿಸಲು ಬಯಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೆಲವು ಕಚೇರಿಗಳು, ಮಂಡಳಿಗಳು ಮತ್ತು ನಿಗಮಗಳನ್ನು ಮೊದಲು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿ. ನಂತರ ಅದರ ಸ್ಥಾಪನೆಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದರು.